ಹಣದ ಕೊರತೆಯಿಂದ ಜನ ಕಾನೂನು ಸೌಲಭ್ಯದಿಂದ ವಂಚಿತರಾಗಬಾರದು ಮತ್ತು ಬಡ ವರ್ಗದವರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಕಾಯಿದೆ ಜಾರಿಗೆ ತರಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಮಂಜುನಾಥ್ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ತಾಲ್ಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ನಾಗರಿಕರಿಗೆ ಕಾನೂನು, ಮೂಲಭೂತ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮಾದ್ಯಮಗಳು ಪ್ರಮುಖ ಪಾತ್ರ ವಹಿಸಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದ್ದು, ಕಾನೂನಿನ ಅರಿವು ಮೂಡಿಸುವಲ್ಲಿ ಮಾದ್ಯಮಗಳ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಅವರು ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ, ಶೋಷಿರ ವರ್ಗದವರಿಗೆ ಉಚಿತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಚಿತವಾಗಿ ಕಾನೂನು ಸೇವೆ ನೀಡುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಸ್ಥಾಪನೆಯಾಗಿದ್ದು, ಮಹಿಳೆಯರು ಸಹ ಇದರ ಪ್ರಯೋಜನ ಪಡೆಯಬಹುದೆಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಅವರು ಮಾತನಾಡಿ, ನ್ಯಾಯಾಲಯದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿದಿದ್ದು, ಪ್ರಕರಣಗಳನ್ನು ಆದಷ್ಟು ಬೇತ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡು ಆದಷ್ಟು ಬೇಗ ಹೆಚ್ಚಿನ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ತಿಳಿಸಿದ ಅವರು, ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ಗೌಡ, ಸಹಾಯಕ ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಕಾರ್ಯದರ್ಶಿ ಎಂ,ಬಿ.ಲೋಕೇಶ್, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -