ಇಪ್ಪತ್ತೈದು ಸಾವಿರ ರೂಪಾಯಿಗಳ ಬಂಡವಾಳ ಹೂಡಿ ಒಂದು ವರ್ಷವಾಗಿದೆಯಷ್ಟೆ. ಈಗ ಅದು ಒಂದು ಲಕ್ಷ ರೂಪಾಯಿಗಳ ಆದಾಯ ತರುತ್ತಿದೆ. ಇದು ಯಾವುದೇ ಶೇರ್ ಮಾರ್ಕೆಟ್ ವ್ಯವಹಾರವಲ್ಲ. ತಾಲ್ಲೂಕಿನ ತಲದುಮ್ಮನಹಳ್ಳಿಯ ರೈತ ಟಿ.ಆರ್.ವೆಂಕಟೇಶ್ ಅವರು ಸಾಕಿರುವ ಮೇಕೆಗಳ ಬೆಲೆಯಿದು.
ಕಳೆದ ವರ್ಷ ಹಿಂಡಿಗನಾಳ ಸಂತೆಯಲ್ಲಿ 25 ಸಾವಿರ ರೂಗಳು ಕೊಟ್ಟು ಜಮ್ನಾಪರಿ ತಳಿಯ ಎರಡು ಮೇಕೆಗಳನ್ನು ತಂದಿದ್ದ ವೆಂಕಟೇಶ್ ಒಂದು ವರ್ಷದ ತರುವಾಯ ಒಂದು ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ. ರೈತರು ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಹೊಸ ಆಶಾಕಿರಣದಂತೆ ಉಪಕಸುಬಿನಲ್ಲೂ ಹಣ ಸಂಪಾದಿಸಬಹುದೆಂದು ತೋರಿಸಿಕೊಟ್ಟಿದ್ದಾರೆ.
ಜಮ್ನಾಪರಿ ತಳಿಯು ನಮ್ಮ ದೇಶೀ ತಳಿಯಾಗಿದ್ದು, ಜಮುನಾ ನದಿ ದಂಡೆಯ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದಲ್ಲಿ ಕಂಡು ಬರುತ್ತಿದ್ದುದರಿಂದ ಜಮ್ನಾಪರಿ ಎಂಬ ಹೆಸರು ಬಂದಿದೆ. ಹೆಚ್ಚಾಗಿ ಹಾಲು ಮತ್ತು ಮಾಂಸಕ್ಕಾಗಿಯೇ ಇವನ್ನು ಸಾಕಲಾಗುತ್ತದೆ. ಉದ್ದವಾದ ಜೋಲು ಕಿವಿಗಳು ಮತ್ತು ಕೊಂಬುಗಳು ಜಮ್ನಾಪುರಿ ಮೇಕೆಗಳ ವಿಶಿಷ್ಠ ಲಕ್ಷಣಗಳು.
ತಲದುಮ್ಮನಹಳ್ಳಿಯ ರೈತ ಟಿ.ಆರ್.ವೆಂಕಟೇಶ್‌ಅವರು ಸಾಕಿರುವ ಒಂದು ಮೇಕೆ 111 ಕೆಜಿ ಇದ್ದರೆ ಮತ್ತೊಂದು 120 ಕೆಜಿ ಭಾರವಿದೆ. ಅವರು ಚಳ್ಳಕೆರೆ ಕುರಿಗಳನ್ನೂ ಸಾಕಿದ್ದು, ಬಕ್ರಿದ್ ಹಬ್ಬದ ಆಸುಪಾಸಿನಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತಿವೆ.
‘ನಾಟಿ ಕುರಿ ಅಥವಾ ಮೇಕೆಯನ್ನು ಸಾಕಿದರೆ 30 ರಿಂದ 40 ಕೆಜಿ ತೂಕ ಬರಲು ಎರಡರಿಂದ ಎರಡೂವರೆ ವರ್ಷ ಸಾಕಬೇಕಾಗುತ್ತದೆ. ಆದರೆ ಒಂದು ವರ್ಷದ ಜಮ್ನಾಪುರಿ ತಳಿಯನ್ನು ತಂದು ಕೇವಲ ಒಂದು ವರ್ಷ ಸಾಕಿರುವೆ. 100 ರಿಂದ 120 ಕೆಜಿ ತೂಗುತ್ತಿವೆ. ಸೀಮೆಹುಲ್ಲು, ರಾಗಿಹುಲ್ಲು, ಹಿಪ್ಪುನೇರಳೆ ಸೊಪ್ಪಿನ ತ್ಯಾಜ್ಯ, ಮನೆಯಲ್ಲಿ ಉಳಿಯುವ ಅಡುಗೆ ಪದಾರ್ಥಗಳನ್ನಷ್ಟೆ ಹಾಕಿ ಸಾಕಿದ್ದೇವೆ. ಇವಕ್ಕೆ ರೋಗಗಳೂ ಹೆಚ್ಚಾಗಿ ಬರುವುದಿಲ್ಲ. ರೈತರಿಗೆ ಉಪಕಸುಬಿನಂತಿರುವ ಮೇಕೆ ಸಾಕಣೆಯಿಂದಾಗಿ ಆರ್ಥಕ ಸದೃಢರಾಗಬಹುದು. ಮನೆಯಲ್ಲಿ ಕುರಿ, ಮೇಕೆಗಳಿದ್ದರೆ ಎ.ಟಿ.ಎಂ ಇದ್ದಂತೆ’ ಎಂದು ವೆಂಕಟೇಶ್ ತಿಳಿಸಿದರು.
- Advertisement -
- Advertisement -
- Advertisement -
- Advertisement -