ಸರ್ಕಾರದಿಂದ ಪಡೆಯಬೇಕಾದ ಸೌಲಭ್ಯಗಳಿಗಾಗಿ ಸಲ್ಲಿಸಬೇಕಾದಂತಹ ವಿವಿಧ ದಾಖಲೆಗಳಲ್ಲಿ ಜಾತಿ, ಆದಾಯ, ವಾಸಸ್ಥಳ ದೃಡೀಕರಣ ಪ್ರಮಾಣ ಪತ್ರಗಳು ಸೇರಿದ್ದು ತಾಲ್ಲೂಕು ಕಚೇರಿಯಲ್ಲಿ ಈ ಪ್ರಮಾಣ ಪತ್ರಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡುವಂತಾಗಿದೆ.
ನಗರದ ತಾಲ್ಲೂಕು ಕಚೇರಿಯಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ಮುಂದೆ ಪ್ರತಿದಿನ ಸಾಲುಗಟ್ಟಿ ನಿಲ್ಲುತ್ತಿರುವ ನಾಗರಿಕರು, ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಲ್ಲಿಸಬೇಕಾದಂತಹ ದಾಖಲೆಗಳನ್ನು ಪಡೆಯಲು ಸಕಾಲದಲ್ಲಿ ಅರ್ಜಿಗಳನ್ನು ಸಲ್ಲಿಸಿದರೂ ಕೂಡಾ ನಿಗದಿತ ಸಮಯದಲ್ಲಿ ದಾಖಲೆ ಪತ್ರಗಳು ಲಭ್ಯವಾಗದೆ ಪರದಾಡುವಂತಾಗಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂದಿ, ಜಾತಿ, ಆದಾಯ ಪ್ರಮಾಣಪತ್ರಗಳು, ಸಂದ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನಗಳು, ಭೂಮಿಗೆ ಸಂಬಂಧಪಟ್ಟ ದಾಖಲೆಗಳು, ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವುಗಳ ಜೊತೆಗೆ ಈಗ ಆಧಾರ್ಕಾರ್ಡುಗಳಿಗೆ ಎನ್ರೋಲ್ ಮಾಡಬೇಕಾದಂತಹ ಹೆಚ್ಚುವರಿ ಹೊಣೆಗಾರಿಕೆಯನ್ನು ಅವರಿಗೆ ಹೊರಿಸಲಾಗಿದ್ದು, ಪ್ರತಿವರ್ಷವೂ ಜೂನ್, ಜುಲೈ ತಿಂಗಳಿನಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಸಕಾಲದಲ್ಲಿ ಬಂದಂತಹ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಸಿಬ್ಬಂದಿ ಹೆಣಗಾಡುವಂತಾಗಿದೆ.
ನಾಗರಿಕರು ಕೂಡಾ ಸಿಬ್ಬಂದಿಯ ಮೇಲೆ ಮುಗಿಬೀಳುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ತಾಲ್ಲೂಕಿನ ದೂರದ ಗ್ರಾಮಗಳಿಂದ ಕೆಲಸ ಕಾರ್ಯಗಳನ್ನು ಬಿಟ್ಟು ಬರುವಂತಹ ನಾಗರಿಕರು ಬೆಳಗಿನಿಂದ ಸಂಜೆಯ ತನಕ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಿಕರ ಆಶಯವಾಗಿದೆ.
- Advertisement -
- Advertisement -
- Advertisement -
- Advertisement -