ಶಿಡ್ಲಘಟ್ಟ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭಾನುವಾರ ರಾತ್ರಿ ಜೀರಂಗಿ ಮೇಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಟ ಕುಣಿತ, ಕಂಸಾಲೆ ನೃತ್ಯ, ಸೋಮನ ಕುಣಿತ, ವೀರಗಾಸೆ, ಪೂಜಾ ಕುಣಿತ ಮುಂತಾದ ಜನಪದ ಪ್ರಕಾರಗಳನ್ನು ಮಕ್ಕಳು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ಮುದಗೊಳಿಸಿದರು.
ಕಳೆದ ಹದಿನೈದು ದಿನಗಳಿಂದ ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ನಡೆಸಿಕೊಂಡು ಬಂದ ಜಾನಪದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಕಲಿತ ಕಲೆಗಳನ್ನು ಪ್ರದರ್ಶಿಸಲಾಯಿತು. ಮಕ್ಕಳು ಶಿಬಿರದಲ್ಲಿ ಕಲಿತಿರುವ ಚಿತ್ರಕಲೆ, ಕಾಗದ ಕಲೆ, ಮಣ್ಣಿನ ಗೊಂಬೆ, ಮುಖವಾಡ, ಹಸೆ ಚಿತ್ರಣ ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು.
ಈಧರೆ ತಿರುಮಲ ಪ್ರಕಾಶ್ ರಚಿಸಿರುವ ‘ಮಳೆ ಹಕ್ಕಿ’ ನಾಟಕವನ್ನು ಮೈಸೂರು ಮೋಹನ್ ನಿರ್ದೇಶನದಲ್ಲಿ ಶಿಬಿರದ ಮಕ್ಕಳು ಅಭಿನಯಿಸಿದರು. ಹುಲಿಮಂಗಲ ಶಿವಕುಮಾರ್ ಮೇಳವನ್ನು, ಆದಿಮ ಹರೀಶ್ ಬೆಳಕಿನ ವಿನ್ಯಾಸವನ್ನು ಮತ್ತು ಬಂಗಾರಪೇಟೆ ಶಾಂತಮ್ಮ ಪ್ರಸಾದನ ಮಾಡಿದ್ದರು. ಮಕ್ಕಳು ಪ್ರದರ್ಶಿಸಿದ ಲಂಬಾಣಿಕುಣಿತ, ಪಟಾ, ಪೂಜಾ, ಸೋಮ, ವೀರಗಾಸೆ, ಕಂಸಾಳೆ ಕುಣಿತಕ್ಕೆ ಚನ್ನಪಟ್ಟಣ ಸಿ.ಎಸ್.ಶಿವಕುಮಾರ್ ನೃತ್ಯ ಸಂಯೋಜಿಸಿದ್ದರೆ, ವಸಂತಕಾಲದಲಿ ಎಂಬ ನೃತ್ಯರೂಪಕ ಮತ್ತು ಕಂಗೀಲು ಕುಣಿತಕ್ಕೆ ತಿರುಮಲಪ್ರಕಾಶ್ ನೃತ್ಯ ಸಂಯೋಜಿಸಿದ್ದರು.
ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಛಲಪತಿಗೌಡ ಮಾತನಾಡಿ,‘ಮಕ್ಕಳ ವಿವಿಧ ಪ್ರದರ್ಶನಗಳಿಂದ ಇಲ್ಲಿ ಪುಟ್ಟ ಜನಪದ ಲೋಕವೇ ಅನಾವರಣಗೊಂಡಿದೆ. ಕೇವಲ ಹದಿನೈದು ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವುದಲ್ಲದೆ, ವಿವಿಧ ಕಲೆಗಳನ್ನು ಕಲಿಸಿ ಪ್ರದರ್ಶನ ಕೊಡುವಷ್ಟು ತಯಾರಿ ನೀಡುವುದೂ ಬಹಳ ಕಷ್ಟ. ನಗರಗಳಲ್ಲಿ ಬೇಸಿಗೆ ಶಿಬಿರಗಳು ಆರ್ಥಕ ಸಂಪಾದನೆಯ ಮೂಲಗಳಾಗಿರುವಾಗ ಕೇವಲ ಕಲೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿರುವ ಇಂಥಹ ಶಿಬಿರಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ’ ಎಂದು ಹೇಳಿದರು.
- Advertisement -
- Advertisement -
- Advertisement -
- Advertisement -