ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಶನಿವಾರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ, ಭಗತ್ ಸಿಂಗ್ ತಾಲ್ಲೂಕು ಅಥ್ಲೆಟಿಕ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿದರು.
ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಾಗಲಿದೆ. ಯುವ ಜನರು ಜಾನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಮತ್ತು ಯುವ ಜನ ಮೇಳಗಳನ್ನು ಒಂದೊಂದು ವರ್ಷ ಒಂದೊಂದು ತಾಲ್ಲೂಕಿನಲ್ಲಿ ಏರ್ಪಡಿಸುವುದರಿಂದ, ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಯಾವುದೇ ದೇಶದ ಸಂಪತ್ತನ್ನು ದೃಢಪಡಿಸುವುದು ಹಣವಲ್ಲ. ಅದು ಮಾನವ ಸಂಪನ್ಮೂಲ. ಇಂತಹ ಮಾನವ ಸಂಪನ್ಮೂಲ ಸರಿದಾರಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ. ಯಾವುದೇ ಒಂದು ದೇಶ ಬಲಿಷ್ಠವಾಗಲು ಅಲ್ಲಿನ ಯುವಜನತೆಯ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಹದಿನೈದರಿಂದ ಮೂವತ್ತೈದನೇ ವಯಸ್ಸಿನ ಯುವ ಸಮುದಾಯ ಸರಿಯಾದ ಮಾರ್ಗದರ್ಶನ ಪಡೆಯಬೇಕು. ಯುವಶಕ್ತಿ ನಿಂತ ನೀರಾಗಬಾರದು. ಅದು ಸದಾ ಜಾಗೃತ ವಹಿಸಿ ಸಂಚಲನತೆಯಿಂದ ಕೂಡುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುವಂತೆ ಯುವಶಕ್ತಿ ತಮ್ಮ ವಯಸ್ಸಿನಲ್ಲಿ ಹಿರಿಯರ ಮಾಗದರ್ಶನ ಪಡೆದು ಉತ್ತಮ ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು ಎಂದರು.
ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಜಾನಪದ ಗೀತೆ, ಭಜನೆ, ಕೋಲಾಟ, ಜಾನಪದ ನೃತ್ಯ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಮುಂತಾದ ಸ್ಪರ್ಧೆಗಳನ್ನು ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಯಿತು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ನಗರಸಭಾ ಸದಸ್ಯರಾದ ಕೃಷ್ಣಮೂರ್ತಿ, ಅನಿಲ್ ಕುಮಾರ್, ತೀರ್ಪುದಾರರಾದ ಲೀಲಾ ಲಕ್ಷ್ಮಿನಾರಾಯಣ್, ವೆಂಕಟರಾಮ್, ಮುನಿರಾಜು, ಈಧರೆ ಪ್ರಕಾಶ್, ಸೋ.ಸು.ನಾಗೇಂದ್ರ, ಜಯಂತಿಗ್ರಾಮ ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -