ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂರವರ ಜಯಂತಿ ಕಾರ್ಯಕ್ರಮವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕೇಸು ದಾಖಲಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ)ಯ ಮುಖಂಡರು ಎಚ್ಚರಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ತಾಲ್ಲೂಕು ಸಂಚಾಲಕ ಕೆ.ಎಸ್.ಅರುಣ್‌ಕುಮಾರ್ ಮಾತನಾಡಿ, ಏಪ್ರಿಲ್ ೧೪ರಂದು ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಅಂಬೇಡ್ಕರ್‌ರವರ ೧೨೪ನೇ, ಬಾಬು ಜಗಜೀವನ್‌ರಾಂರವರ ೧೦೮ನೇ ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ. ಜಯಂತಿಯಂದು ಎಲ್ಲ ಇಲಾಖೆಗಳಿಂದಲೂ ಹಾಗೂ ಎಲ್ಲ ಗ್ರಾಮ ಪಂಚಾಯತಿಗಳಿಂದಲೂ ಪಲ್ಲಕ್ಕಿಗಳ ಉತ್ಸವ ನಡೆಸಲು ತಹಸೀಲ್ದಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾವುದೆ ಇಲಾಖೆಯ ಅಧಿಕಾರಿಗಳು ಅಥವಾ ಗ್ರಾಮ ಪಂಚಾಯತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು, ಭಾಗವಹಿಸಿದರೂ ಪಲ್ಲಕ್ಕಿಗಳ ನಿರ್ಮಾಣ ಮಾಡದಿರುವುದು ಸೇರಿದಂತೆ ಕಾರ್ಯಕ್ರಮ ಕುರಿತು ಯಾವುದೆ ರೀತಿಯಲ್ಲಾದರೂ ನಿರ್ಲಕ್ಷ್ಯವಹಿಸಿದ್ದೇ ಆದಲ್ಲಿ ನಮ್ಮ ಸಂಘಟನೆಯಿಂದ ಅಂತಹ ಅಧಿಕಾರಿಗಳ ವಿರುದ್ದ ಕೇಸು ದಾಖಲಿಸಲಾಗುವುದು ಎಂದರು.
ಪ್ರತಿ ಗ್ರಾಮ ಪಂಚಾಯತಿಯಿಂದಲೂ ಪಲ್ಲಕ್ಕಿಯನ್ನು ನಿರ್ಮಿಸುವ ಜತೆಗೆ ತಾಲ್ಲೂಕು ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ವಾಹನ ಸೌಕರ್ಯವನ್ನೂ ಸಹ ಮಾಡಬೇಕಿದೆ ಎಂದು ಸಭೆಯಲ್ಲಿ ತೀರ್ಮಾನವಾಗಿದ್ದು ಅದರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕೆಂದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಜಮೀನನ್ನು ಮೀಸಲು ಇರಿಸುವಂತೆ ಹಲವಾರು ವರ್ಷಗಳಿಂದಲೂ ಸಂಬಂದಿಸಿದವರನ್ನು ಕೋರಿತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಭಾರಿಯಾದರೂ ಜಮೀನು ಮೀಸಲಿರಿಸುವ ಮೂಲಕ ಜಯಂತಿಗೆ ಅರ್ಥಕಲ್ಪಿಸುವಂತೆ ಕೋರಿದರು.
ಹಾಗೆಯೆ ತಾಲ್ಲೂಕು ಕಚೇರಿ ಎದುರು ಅಂಬೇಡ್ಕರ್‌ರವರ ಪುತ್ಥಳಿಯನ್ನು ಸ್ಥಾಪಸುವಂತೆ ತಹಸೀಲ್ದಾರರನ್ನು ಕೋರಿದ್ದು ಅದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಸೊಣ್ಣೇನಹಳ್ಳಿ ಮುನಿವೆಂಕಟಪ್ಪ, ತಾಲ್ಲೂಕು ಸಂಘಟನಾ ಸಂಚಾಲಕರಾದ ಕೆ.ವಿ.ಕಿರಣ್‌ಕುಮಾರ್, ಎನ್.ಅಶೋಕ್, ಜಯಶೀಲನ್, ನರಸಿಂಹಮೂರ್ತಿ, ಶ್ರೀನಿವಾಸ್, ಶಿವಪ್ಪ, ನಾಗರಾಜ್, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -