ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯು ಒಂದೆಡೆ ಕೆರೆ, ಕುಂಟೆ, ಚೆಕ್ ಡ್ಯಾಮ್ಗಳನ್ನು ತುಂಬಿಸಿ ಹೊರಕ್ಕೆ ನೀರು ಹರಿಸುತ್ತಾ ಜಲಪಾತಗಳನ್ನು ಸೃಷ್ಟಿಸಿ ಸಂತಸವನ್ನು ಉಕ್ಕಿಸಿದ್ದರೆ, ಮತ್ತೊಂದೆಡೆ ಮಳೆಯ ತಣುವನ್ನು ತಡೆಯದೇ ಜಂತಿಕೆ ಮನೆಗಳು ಹಾಗೂ ಹೊಲಗಳು ಕುಸಿದು ನಷ್ಟವನ್ನೂ ತಂದಿದೆ. ಶಿಡ್ಲಘಟ್ಟ ತಾಲ್ಲೂಕಿನ ಜೋಡಿಕಾಚಹಳ್ಳಿ ಬಳಿಯ ಕೆರೆಯು ತುಂಬಿ ಹರಿಯುತ್ತಿದ್ದು, ಮಲೆನಾಡಿನ ಜಲಪಾತದಂತೆ ಕಂಡುಬರುತ್ತಿದೆ.ತಾಲ್ಲೂಕಿನ ದಿಬ್ಬೂರಹಳ್ಳಿ, ಗಂಜಿಗುಂಟೆ, ಕುಂದಲಗುರ್ಕಿ, ಬಶೆಟ್ಟಹಳ್ಳಿ, ಈ.ತಿಮ್ಮಸಂದ್ರ ಮುಂತಾದ ಗ್ರಾಮ ಪಂಚಾಯತಿಗಳ ಸುತ್ತ ಮುತ್ತ ಕೆರೆ ಕುಂಟೆಗಳು ಹಾಗೂ ಚೆಕ್ಡ್ಯಾಮ್ಗಳು ತುಂಬಿ ಹರಿದಿವೆ. ನಗರದ ಸಿದ್ದಾರ್ಥ ನಗರ ಹಾಗೂ ಸುತ್ತಮುತ್ತ ಮಂಗಳವಾರ 15 ಮನೆಗಳ ಕೆಲ ಭಾಗಗಳು ಕುಸಿದಿವೆ. ತಾಲ್ಲೂಕಿನಾದ್ಯಂತ ಸುಮಾರು 30 ಮನೆಗಳು ಕುಸಿದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ. ತೆನೆ ತುಂಬಿದ್ದ ರಾಗಿ ಕಾಳುಗಳು ಹಲವೆಡೆ ಮಲಗಿದ್ದು, ಜೊತೆಗೆ ಇನ್ನೂ ವಿವಿಧ ಬೆಳೆಗಳ ನಷ್ಟವುಂಟಾಗಿದ್ದು, ಅದನ್ನು ಇನ್ನೂ ಪರಿಶೀಲಿಸಿ ವರದಿಯನ್ನು ತಯಾರಿಸಲಾಗುವುದು. ಎಲ್ಲೂ ಪ್ರಾಣಹಾನಿ ಸಂಭವಿಸಿಲ್ಲ. ಮಳೆಯಿಂದಾಗಿ ಅಂತರ್ಜಲವಂತೂ ಈ ಬಾರಿ ವೃದ್ಧಿಸಿದ್ದು ಬೇಸಿಕೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಅವರು ಹೇಳುತ್ತಾರೆ. ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ಬಳಿ ರಾಗಿ ಹೊಲಗಳು ಮಳೆಯಿಂದಾಗಿ ನೆಲಕಚ್ಚಿವೆ.ಹಿಂದೆ ಒಂದು ಕೆರೆ ತುಂಬಿದರೆ ಮತ್ತೊಂದು ಕೆರೆಗೆ ನೀರು ಹರಿದುಹೋಗುವಂತೆ ಸಂಪರ್ಕ ಕಾಲುವೆಗಳನ್ನು ನಿರ್ಮಿಸಿದ್ದರು. ಈ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದರ ಪರಿಣಾಮ ಕೆರೆ ತುಂಬಿದ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಹಲವೆಡೆ ಕೆರೆಗಳ ಒತ್ತುವರಿಯಾಗಿರುವುದರಿಂದ ಆ ಒತ್ತುವರಿ ಸ್ಥಳದಲ್ಲಿನ ಬೆಳೆಗಳು ನೀರು ತುಂಬಿಕೊಂಡು ಹಾಳಾಗಿವೆ ಎನ್ನುತ್ತಾರೆ ಕೆಲ ಹಿರಿಯರು.
Subscribe to ನಮ್ಮ ಶಿಡ್ಲಘಟ್ಟ Newspaper
Launching Soon! Register for your Free Newspaper Copy Today.