ಕೆರೆ, ಕುಂಟೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವ ಮೂಲಕ ಜಿಲ್ಲಾ ಆಡಳಿತ ಕೆರೆಗಳನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು, ಗಂಜಿಗುಂಟೆ ಗ್ರಾಮಸ್ಥರೊಂದಿಗೆ ತಾಲ್ಲೂಕಿನ ಗಂಜಿಗುಂಟೆಯ ರೆಡ್ಡಿಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕಳೆದ ಹಲವು ದಿನಗಳಿಂದಲೂ ಬೀಳುತ್ತಿರುವ ಮಳೆಯಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಕೆಲವು ಕೆರೆಗಳು ಕೋಡಿ ಹರಿದಿದೆ. ತಾಲ್ಲೂಕಿನ ಗಂಜಿಗುಂಟೆಯ ರೆಡ್ಡಿಕೆರೆಯು ಮೈದುಂಬಿ ಕೋಡಿ ಹರಿಯುತ್ತಿದ್ದು ಈ ವರ್ಷದಲ್ಲಿ ಕೋಡಿ ಹರಿದ ಮೊದಲ ಕೆರೆ ಇದಾಗಿದೆ ಎಂದರು.
ಆದರೆ ಬಹುತೇಕ ಕೆರೆ, ಕುಂಟೆ, ಕಾಲುವೆಗಳ ಒತ್ತುವರಿ ನಡೆದಿದ್ದು ಇದರಿಂದ ಬಿದ್ದ ಮಳೆ ನೀರು ಸಂಪೂರ್ಣವಾಗಿ ಕೆರೆ ಕುಂಟೆಗಳಿಗೆ ಹರಿಯುತ್ತಿಲ್ಲ. ವ್ಯರ್ಥವಾಗುತ್ತಿದೆ ಎಂದು ವಿಷಾಸಿದರು.
ಹಾಗಾಗಿ ತಾಲ್ಲೂಕು ಹಾಗೂ ಜಿಲ್ಲಾಡಳಿತವು ಕೆರೆ ಕುಂಟೆ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ಒತ್ತುವರಿದಾರರು ಯಾರೇ ಆಗಲಿ, ಎಷ್ಟೆ ಬಲಿಷ್ಠರಾಗಿರಲಿ ಒತ್ತುವರಿಯನ್ನು ತೆರವುಗೊಳಿಸಬೇಕು, ಅವರ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ಒತ್ತುವರಿದಾರರಿಗೆ ಸ್ಪಷ್ಟವಾದ ಸಂದೇಶವನ್ನು ನೀಡಬೇಕಿದೆ ಎಂದರು.
ಕ್ರಮ ಇಲ್ಲವಾದಲ್ಲಿ ಒತ್ತುವರಿ ಮುಂದುವರೆಯುತ್ತದೆ. ಮುಂದಿನ ಪೀಳಿಗೆಗೆ ಕೆರೆ ಕುಂಟೆಗಳನ್ನು ಭಾವಚಿತ್ರಗಳ ಮೂಲಕ ವಿವರಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆಯಲ್ಲದೆ ಕುಡಿಯುವ ನೀರಿಗೂ ಪರದಾಡುವಂತ ದುಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಕಾರ್ಯಕರ್ತರು, ಗಂಜಿಗುಂಟೆಯ ಗ್ರಾಮಸ್ಥರು ರೆಡ್ಡಿಕೆರೆಗೆ ಬಾಗಿನ ಅರ್ಪಿಸಿದರು. ಬಾಗಿನ ಅರ್ಪಿಸುವ ವೇಳೆಗೆ ಮಳೆ ಸುರಿಯಲಾರಂಭಿಸಿತಾದರೂ ಮಳೆಯನ್ನೂ ಲೆಕ್ಕಿಸದೆ ರೈತರು ಬಾಗಿನ ಅರ್ಪಿಸಿ ಸಂತಸ ಪಟ್ಟರು.
ಪ್ರತಿ ವರ್ಷವೂ ಇದೆ ರೀತಿ ಕಾಲ ಕಾಲಕ್ಕೆ ಮಳೆ ಬಿದ್ದು ಕೆರೆಗಳು ಕೋಡಿ ಹರಿಯಲಿ, ಬೆಳೆಗಳು ಬೆಳೆದು ರೈತರು, ನಾಗರೀಕರ ಬದುಕು ಸಮೃದ್ದಿ ಆಗಲಿ ಎಂದು ಮಳೆರಾಯನನ್ನು ಪ್ರಾರ್ಥಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೀರಾಪುರ ಮಂಜುನಾಥ್, ನಗರಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ದೇವರಾಜ್, ಕೃಷ್ಣಪ್ಪ, ಗಂಜಿಗುಂಟೆಯ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ನರಸಿಂಹರೆಡ್ಡಿ, ವೆಂಕಟರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -