ಸರಿಸುಮಾರು ಒಂದು ತಿಂಗಳ ಹಿಂದೆ ಕೆಜಿಗೆ ₨ 35 ರಿಂದ 40 ರವರೆಗೆ ಮಾರಾಟವಾಗುತ್ತಿದ್ದ ಬೆಂಗಳೂರು ಬ್ಲೂ ದ್ರಾಕ್ಷಿ ಬೆಲೆ ದಿಢೀರನೇ ಕೆಜಿಗೆ ₨ 10 ರಿಂದ 12ಕ್ಕೆ ಕುಸಿದಿದ್ದು, ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿ ಕಟಾವು ಮಾಡದೇ ದ್ರಾಕ್ಷಿಯನ್ನು ಯಥಾರೀತಿ ತೋಟದಲ್ಲಿ ಉಳಿಸಿಕೊಂಡಿದ್ದ ದ್ರಾಕ್ಷಿ ಬೆಳೆಗಾರರು ಈಗ ಕಟಾವು ಮಾಡಲಾಗದೇ ಮತ್ತು ಹೆಚ್ಚಿನ ಬೆಲೆಗೆ ಮಾರಲಾಗದೇ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಶರತ್ ದ್ರಾಕ್ಷಿ ₨ 60 ರಿಂದ ₨ 40 ಕ್ಕೆ ಕುಸಿದಿದೆ. ಕೃಷ್ಣ ದ್ರಾಕ್ಷಿ ₨ 70 ರಿಂದ ₨ 55 ಕ್ಕೆ ಕುಸಿದಿದ್ದರೆ, ದಿಲ್‌ಖುಷ್ ದ್ರಾಕ್ಷಿ ₨ 35 ರಿಂದ ₨ 20 ಕ್ಕೆ ಕುಸಿದಿದೆ. ಅನಾಬಿಷ ದ್ರಾಕ್ಷಿ ₨ 25 ರಿಂದ ₨ 15 ಕ್ಕೆ ಕುಸಿದಿದೆ.
ರೇಷ್ಮೆಕೃಷಿ ಮತ್ತು ಹೈನುಗಾರಿಕೆ ಹೊರತುಪಡಿಸಿದರೆ ತೋಟಗಾರಿಕೆ ಬೆಳೆಗಳಲ್ಲಿ ದ್ರಾಕ್ಷಿಯೇ ಪ್ರಮುಖ ಬೆಳೆಯಾಗಿದ್ದು, ಬೆಲೆ ಕುಸಿತದಿಂದ ಭಾರಿ ಆರ್ಥಿಕ ನಷ್ಟಕ್ಕೆ ಒಳಗಾಗುವ ಆತಂಕದಲ್ಲಿ ರೈತರಿದ್ದಾರೆ.
‘ತಿಂಗಳ ಹಿಂದೆ ಕೆಜಿಗೆ ₨ 60 ಬೆಲೆಯಿದ್ದಾಗ, ದ್ರಾಕ್ಷಿಗೆ ಬೇಡಿಕೆ ಹೆಚ್ಚುವುದು ಮತ್ತು ಬೆಲೆ ಏರಿಕೆಯಾಗುವುದೆಂದು ಭಾವಿಸಿದ್ದೆವು. ಆದರೆ ಈಗ ಕಣ್ಣೆದುರಿಗೆ ದ್ರಾಕ್ಷಿ ಗೊಂಚಲು ಇಟ್ಟುಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಬೇಕಿದೆ’ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ.
ದ್ರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೇಲೂರು, ಮುತ್ತೂರು, ಅಪ್ಪೇಗೌಡನಹಳ್ಳಿ, ಮಳ್ಳೂರು, ಮಳಮಾಚನಹಳ್ಳಿ, ತಾದೂರು, ಬಸವಾಪಟ್ಟಣ, ಯಣ್ಣಂಗೂರು, ತಿಪ್ಪೇನಹಳ್ಳಿ, ಹುಜಗೂರು, ಗೊರಮಡುಗು ಮುಂತಾದ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಬೆಳೆಯನ್ನು ಮಾರಾಟ ಮಾಡಲು ಪಡಿಪಟಾಲು ಪಡುತ್ತಿದ್ದಾರೆ. ಕೊಳ್ಳಲು ಮತ್ತು ವಹಿವಾಟು ನಡೆಸಲು ಯಾರೂ ಸಹ ಮುಂದೆ ಬರುತ್ತಿಲ್ಲ ಎಂಬ ಆತಂಕ ಅವರಲ್ಲಿ ಆವರಿಸಿದೆ.
‘ಒಂದು ತಿಂಗಳ ಹಿಂದೆ ಅನಾಬಿಷ್ ಮತ್ತು ದಿಲ್‌ಕುಶ್ ದ್ರಾಕ್ಷಿಗಳಿಗೆ ಭಾರಿ ಬೇಡಿಕೆಯಿತ್ತು. ಹೆಚ್ಚಿನ ಹೆಚ್ಚಿನ ಬೆಲೆಗೂ ಖರೀದಿಸಲು ವ್ಯಾಪಾರಸ್ಥರು ಸಿದ್ಧರಿದ್ದರು. ನಮ್ಮ ತಾಲ್ಲೂಕಿನ ದ್ರಾಕ್ಷಿ ಜಾರ್ಖಂಡ್, ದೆಹಲಿ, ಉತ್ತರಪ್ರದೇಶ, ತಮಿಳುನಾಡು, ಕೇರಳ, ಆಂದ್ರ, ಒರಿಸ್ಸಾಗೆ ರಫ್ತಾಗುತ್ತದೆ. ಕಳೆದ ತಿಂಗಳು ಬೆಲೆ ಏರಿಕೆಯಾಗಿದ್ದು ಕಂಡು ಔಷಧಿ ತಯಾರಕರು ಸಹ ಔಷಧಿ ಮತ್ತು ರಾಸಾಯನಿಕ ವಸ್ತುಗಳ ಬೆಲೆ ಏರಿಕೆ ಮಾಡಿದರು. ಆದರೆ ಈಗ ನೋಡಿದರೆ ಬೆಲೆ ಆಕಾಶದಿಂದ ಪಾತಾಳಕ್ಕೆ ಬಿದ್ದಿದೆ. ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಅಪ್ಪೇಗೌಡನಹಳ್ಳಿ ರೈತ ಎ.ಎಂ.ತ್ಯಾಗರಾಜ್ ತಿಳಿಸಿದರು.
“ಕೆಜಿಗೆ ₨ 60ರಂತೆ ಲೆಕ್ಕವಾದರೂ 20 ಟನ್ ದ್ರಾಕ್ಷಿ ಬೆಳೆಗೆ ₨ 12 ಲಕ್ಷವಾದರೂ ಆದಾಯ ಬರುತಿತ್ತು. ಆದರೆ ಈಗ ಬೆಲೆಯು ₨ 15 ರಿಂದ 20ಕ್ಕೆ ಕುಸಿದಿದ್ದು, 20 ಟನ್‌ಗೆ ₨ 4 ಲಕ್ಷದಷ್ಟು ಸಹ ಆದಾಯ ಬರುವುದಿಲ್ಲ. ಇನ್ನೂ ಕೂಲಿಕಾರ್ಮಿಕರ ಕೂಲಿ, ಔಷಧಿ, ಗೊಬ್ಬರ, ಕೊಳವೆಬಾವಿ ನೀರು, ಟ್ಯಾಂಕರ್ ನೀರು ಮುಂತಾದವುಗಳಿಗೆ ಖರ್ಚು–ವೆಚ್ಚ ಮಾಡಿದಷ್ಟು ಕೂಡ ಆದಾಯ ಬರುವುದಿಲ್ಲ. ಈ ಬಾರಿ ಮಾತ್ರ ನಮಗೆ ತುಂಬಾ ನಷ್ಟವಾಗಿದೆ’ ಎಂದು ಅವರು ತಿಳಿಸಿದರು.
‘ಆಲಿಕಲ್ಲಿನ ಮಳೆಯಿಂದ ಸಾಕಷ್ಟು ನಷ್ಟವನ್ನು ಕಳೆದ ಬಾರಿ ಹೊಂದಿದ್ದೆವು. ವಿಷಗಾಳಿ ಸೋಕದಂತೆ ತೋಟದ ಸುತ್ತಲೂ ಬಲೆ ಹಾಕಬೇಕು. ದ್ರಾಕ್ಷಿಯು ಕೋತಿ ಮತ್ತು ಪಕ್ಷಿಗಳ ಪಾಲಾಗದಂತೆ ಎಚ್ಚರವಹಿಸಬೇಕು. ಅಗತ್ಯ ಬಿದ್ದರೆ, ಗೊಬ್ಬರ ಕೂಡ ತಂದು ಸುರಿಯಬೇಕು. ಇದಕ್ಕೆಲ್ಲಾ ಲಕ್ಷಾಂತರ ರೂಪಾಯಿ ಖರ್ಚು ಆಗುವಾಗ, ಕೆಜಿಗೆ ಬರೀ ₨ 15 ರಿಂದ 20ರಂತೆ ಬೆಳೆ ಮಾರಿದರೆ ನಮ್ಮ ಕೈಗೇನು ದಕ್ಕುತ್ತೆ’ ಎಂದು ನಾಗೇಂದ್ರಪ್ರಸಾದ್ ತಿಳಿಸಿದರು.
‘ವೆಂಕಟಗಿರಿಕೋಟೆ ಮತ್ತು ವಿಜಯಪುರಕ್ಕೆ ನಾವೇ ಖುದ್ದಾಗಿ ಹೋಗಿ ವ್ಯಾಪಾರಸ್ಥರನ್ನು ಕರೆದರೂ ದ್ರಾಕ್ಷಿ ಖರೀದಿ ಮಾಡಲು ಸಿದ್ಧರಿಲ್ಲ. ಬೆಲೆ ಇನ್ನಷ್ಟು ಕಡಿಮೆಯಾಗಲಿ ಅಂತ ಕಾಯುತ್ತಿದ್ದಾರೆ. ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಜ್ಯೂಸ್ ಮತ್ತು ವೈನ್ ತಯಾರಿಸುವವರು ಕೊಳ್ಳುತ್ತಾರೆ. ಉಳಿದ ದ್ರಾಕ್ಷಿಗಳ ಕಥೆ ಕೇಳುವವರಿಲ್ಲ. ಇಂತಿಷ್ಟು ಬೆಲೆಯಿಂದ ನಮಗೆ ಸ್ವಲ್ಪವಾದರೂ ಆದಾಯ ಬರಲಿ ಎಂದು ನಾವು ನಿರೀಕ್ಷಿಸುತ್ತಿದ್ದರೆ, ಎಲ್ಲಾ ನಿರೀಕ್ಷೆಗಳು ಹುಸಿಯಾಗುತ್ತಿವೆ. ದ್ರಾಕ್ಷಿ ಗೊಂಚಲು ಕಣ್ಣೆದುರಿಗಿದ್ದು ಮಾರಾಟವಾಗದೇ ಕಣ್ಣಿಗೆ ಕುಕ್ಕುವಂತೆ ಭಾಸವಾಗುತ್ತದೆ’ ಎಂದು ಅವರು ತಿಳಿಸಿದರು.
ಈಡೇರದ ಶೀತಲೀಕರಣ ಘಟಕದ ಬೇಡಿಕೆ: ‘ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆಂದೇ ಪ್ರತ್ಯೇಕ ಶೀತಲೀಕರಣ ಘಟಕ ಸ್ಥಾಪಿಸುವಂತೆ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಒಂದು ವೇಳೆ ಶೀತಲೀಕರಣ ಘಟಕ ಇದ್ದಿದ್ದರೆ, ನಾವು ಬೆಳೆ ಕಟಾವು ಮಾಡಿ ಅದರಲ್ಲಿ ಶೇಖರಿಸಿ ಇಡಬಹುದಿತ್ತು. ಉತ್ತಮ ಬೆಲೆ ಬಂದಾಗ, ಅದನ್ನು ಮಾರಾಟ ಮಾಡಬಹುದಿತ್ತು’ ಎಂದು ಗಂಗಾದೇವಿ ದ್ರಾಕ್ಷಿ ಬೆಳೆಗಾರ ಒಕ್ಕೂಟದ ಸದಸ್ಯರು ಹೇಳುತ್ತಾರೆ.
‘ತಾಲ್ಲೂಕಿನಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡಾದರೂ ಸರ್ಕಾರವು ಶೀತಲೀಕರಣ ಘಟಕದ ಸ್ಥಾಪನೆಗೆ ಮುಂದಾಗಬೇಕು. ಆ ಸೌಲಭ್ಯ ಇರದಿದ್ದರೆ, ಖಂಡಿತವಾಗಿಯೂ ನಾವು ಅಪಾರ ನಷ್ಟಕ್ಕೆ ಒಳಗಾಗುತ್ತೇವೆ. ಅಧಿಕಾರಿಗಳು ತಾಲ್ಲೂಕಿನಲ್ಲಿ ಬೆಳೆಯುವ ದ್ರಾಕ್ಷಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿಲ್ಲ. ನಮ್ಮಲ್ಲಿನ ಉತ್ಪಾದನೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಆಗಬೇಕಿದೆ’ ಎಂದು ಅವರು ಹೇಳುತ್ತಾರೆ.
- Advertisement -
- Advertisement -
- Advertisement -