ಕೊಳೆತ ತ್ಯಾಜ್ಯಗಳ ರಾಶಿ, ಕಪ್ಪುಬಣ್ಣಕ್ಕೆ ತಿರುಗಿದ ನಿಂತ ನೀರು, ಕೆಟ್ಟ ವಾಸನೆ, ಕಟ್ಟಡದ ಮೇಲೆಲ್ಲಾ ಹಸಿರುಗಟ್ಟಿದ ಪಾಚಿ, ಕಟ್ಟಡದ ಮೇಲೂ ನಿಂತ ನೀರು ಮತ್ತು ತ್ಯಾಜ್ಯ. ಇದರೊಂದಿಗೆ ಕೆಟ್ಟು ಕಿಲುಬುಗಟ್ಟುತ್ತಿರುವ ಜೆಸಿಬಿ ಯಂತ್ರ. ಇವೆಲ್ಲಾ ಎಲ್ಲೂ ನಗರದ ಹೊರವಲಯದ ಪಾಳು ಕಟ್ಟಡದ ಚಿತ್ರಣವಲ್ಲ.
ನಗರಸಭೆಯಿಂದ ಎರಡು ವರ್ಷಗಳ ಹಿಂದಷ್ಟೇ ಅಂಚೆಕಚೇರಿಯ ಮುಂದೆ ನಿರ್ಮಾಣವಾದ ಕಟ್ಟಡಗಳ ಹಾಗೂ ಅದರ ಮುಂದಿನ ದುಸ್ಥಿತಿಯ ಚಿತ್ರಣವಾಗಿದೆ.
‘ನಗರದ 13 ನೇ ವಾರ್ಡಿ ಗೆ ಸೇರಿರುವ ಕಾಂಗ್ರೆಸ್ ಭವನದ ಮುಂಭಾಗದ ನಗರಸಭೆಯ ಕಟ್ಟಡಗಳು ಹಾಗೂ ಸುತ್ತಲಿನ ವಾತಾವರಣ ತೀರಾ ಹದಗೆಟ್ಟಿದೆ. ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ರೀತಿಯಲ್ಲಿ ಈ ಪ್ರದೇಶ ಸೊಳ್ಳೆಗಳ ತಾಣವಾಗಿ ಪರಿವರ್ತಿತವಾಗಿದೆ. ನಗರಸಭೆಯವರು ಲಕ್ಷಾಂತರ ರೂಗಳು ಖರ್ಚು ಮಾಡಿ ಮಳಿಗೆಗಳನ್ನು ನಿರ್ಮಿಸಿ ಅದನ್ನು ಬಾಡಿಗೆಗೂ ಕೊಡದೆ, ಸ್ವಚ್ಛವಾಗೂ ಇಡದೆ ಜನರ ಹಣವನ್ನು ಪೋಲು ಮಾಡುತ್ತಿದ್ದಾರೆ.
ಊರೆಲ್ಲಾ ಸ್ವಚ್ಛವಾಗಿಡಬೇಕಾದ ನಗರಸಭೆಯವರು ಅವರ ಸ್ಥಳವನ್ನೇ ಅವ್ಯವಸ್ಥೆಯ ಆಗರವನ್ನಾಗಿಸಿರುವುದು ವಿಪರ್ಯಾಸ. ನಗರಸಭೆಯ ಗೋದಾಮಿನ ಮೇಲೆ ತ್ಯಾಜ್ಯಗಳೊಂದಿಗೆ ನೀರು ನಿಂತು ಪಾಚಿಕಟ್ಟಿದೆ. ಈ ಅವ್ಯವಸ್ಥೆಯಿಂದಾಗಿ ಕಟ್ಟಡವು ಹೆಚ್ಚು ಕಾಲ ಬಾಳದು. ಪುರಠಾಣೆ ಪಕ್ಕದ ರಸ್ತೆಯ ಬದಿಯಿರುವ ನಗರಸಭೆಯ ಸ್ಥಳವು ಕೂಡ ತ್ಯಾಜ್ಯ ಸುರಿಯುವ ಸ್ಥಳವಾಗಿ ಪರಿವರ್ತಿತವಾಗಿದೆ. ಇದರಿಂದಾಗಿ ಸುತ್ತಮುತ್ತ ವಾಸಿಸುವ ಜನರಿಗೆ ಕೆಟ್ಟ ವಾಸನೆ ಸದಾ ಕಾಡುತ್ತಿದೆ’ ಎಂದು ಕನ್ನಡಪರ ಸಂಘಟನೆಯ ಮುಖಂಡ ಜೆ.ಎಸ್.ವೆಂಕಟಸ್ವಾಮಿ ದೂರಿದ್ದಾರೆ.
- Advertisement -
- Advertisement -
- Advertisement -
- Advertisement -