ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಈಗ ಜಾತ್ರೆಗಳ ಸಂಭ್ರಮ. ಒಂದೊಂದು ದಿನ ಒಂದೊಂದು ಗ್ರಾಮದಲ್ಲಿ ಜಾತ್ರೆಗಳು ನಡೆಯುತ್ತಿವೆ.
`ಜನರ ಜೀವಶಕ್ತಿ’ಯಾಗಿ ಮಳೆ ಸುರಿದು ಧಾನ್ಯ ರಾಶಿ ತುಂಬಿ ತುಳುಕಾಡಲಿ ಎಂಬ ಆಶಾಭಾವನೆಯಿಂದ ಊರಿನ ದೇವತೆ, ದೇವರುಗಳನ್ನು ಪೂಜಿಸುವ ಸಾಂಘಿಕ ಉತ್ಸವ. ಗಂಗಮ್ಮ, ಮಾರಮ್ಮ, ದುಗ್ಗಮ್ಮ, ಸಪ್ಲಮ್ಮ, ಚೌಡೇಶ್ವರಮ್ಮ, ಸಲ್ಲಾಪುರಮ್ಮ, ಮೈಲಮ್ಮ, ಮುಡುಗಲಮ್ಮ , ಈಶ್ವರ, ಈರಲಪ್ಪ, ಮುನೇಶ್ವರ, ಆಂಜನೇಯ ಎಲ್ಲ ದೇವರುಗಳಿಗೆ ವಿಶೇಷ ಪೂಜೆ ನಡೆಯುತ್ತದೆ.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಜಾತ್ರಾ ಮಹೋತ್ಸವವನ್ನು ವಿಶೇಷ ಶ್ರದ್ಧಾ ಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು. ಮನೆಗಳಿಗೆ ಸುಣ್ಣ ಬಣ್ಣ ಬಳಿದು ವಿವಿಧ ಖಾದ್ಯಗಳನ್ನು ತಯಾರಿಸಿ ನೆಂಟರನ್ನು ಆಹ್ವಾನಿಸಿ ಉಣಬಡಿಸಿ ಜನರು ಸಂಭ್ರಮಿಸುತ್ತಿದ್ದರು. ನಾಗಮಂಗಳ ಗ್ರಾಮದಲ್ಲಿ ದೀಪ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಗ್ರಾಮ ದೇವರುಗಳಾದ ಸಲ್ಲಾಪುರಮ್ಮ, ಚೌಡೇಶ್ವರಮ್ಮ, ದೊಡ್ಡಮ್ಮ ಮುಂತಾದ ದೇವರುಗಳಿಗೆ ಪೂಜೆ ಸಲ್ಲಿಸಿದರು. ಪ್ರತಿ ಬೀದಿ, ದೇಗುಲಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತವಾಗಿತ್ತು. ದೇಗುಲದ ಎದುರು ಅಗ್ನಿಕುಂಡ ಹಾಕಿ ದೀಪಗಳನ್ನು ಹೊತ್ತು ತರುವ ಮಹಿಳೆಯರು ಅದರಲ್ಲಿ ಸಾಗಿ ಭಕ್ತಿ ಪ್ರದರ್ಶಿಸಿದರು. ಮೆರವಣಿಗೆಯಲ್ಲಿ ವೀರಗಾಸೆ, ತಮಟೆ ವಾದ್ಯ ನೋಡುಗರ ಮನಸೆಳೆಯುವಂತಿತ್ತು. ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ಪೂಜೆಯಲ್ಲಿ ಪಾಲ್ಗೊಂಡರು.
ಊರ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ನಾಗಮಂಗಲ ಗ್ರಾಮದ ಕಲಾವಿದರು ಪ್ರದರ್ಶಿಸಿದರು.
ಎನ್.ಟಿ.ಪ್ರಕಾಶ್ಗೌಡ, ಶಂಕರಪ್ಪ, ನಾಗಪ್ಪ, ತಮ್ಮಣ್ಣ, ಶಿವಕುಮಾರ್, ಶ್ರೀನಿವಾಸಗೌಡ, ಚಂದ್ರಪ್ಪ, ಮುನಿನಾರಾಯಣಪ್ಪ, ಕನಕರಾಜು, ಕೃಷ್ಣಯ್ಯಶೆಟ್ಟಿ, ಶ್ರೀರಾಮಪ್ಪ, ಚನ್ನಕೇಶವ, ಮುನಿರಾಜು, ರಾಜಣ್ಣ, ಎನ್.ಡಿ.ನಾರಾಯಣಪ್ಪ, ವೆಂಕಟೇಶ್, ಸೀತಾರಾಮಶಾಸ್ತ್ರಿ, ವೆಂಕಟಾಚಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -