ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಶುಕ್ರವಾರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಡಿ.ಎಸ್. ಗುರುಬಸಪ್ಪ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಣಪತಿ ಸಾಕರೆ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ೧,೫೦೦ ಕ್ಕೂ ಹೆಚ್ಚು ಮಂದಿ ಜನಸಂಖ್ಯೆಯಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ, ಈಗಿರುವ ೨ ಕೊಳವೆಬಾವಿಗಳಲ್ಲಿ ಕೇವಲ ಒಂದಿಂಚು ನೀರು ಮಾತ್ರ ಬರುತ್ತಿದ್ದು, ಕೂಡಲೇ ೨ ಕೊಳವೆಬಾವಿಗಳನ್ನು ಕೊರೆಯಿಸಿಕೊಡಬೇಕು ಎಂದು ಅವರು ಸಲ್ಲಿಸಿರುವ ಮನವಿ ಪತ್ರದಲ್ಲಿ ಕೋರಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರಧಾನಕಾರ್ಯದರ್ಶಿ ಆನೂರು ಬಾಲಮುರಳೀಕೃಷ್ಣ, ಭಕ್ತರಹಳ್ಳಿ ಪ್ರತೀಶ್, ದೊಡ್ಡತೇಕಹಳ್ಳಿ ಕದಿರಪ್ಪ, ಆನೆಮಡಗು ಶಿವಣ್ಣ, ಡಿ.ವಿ.ನಾರಾಯಣಸ್ವಾಮಿ, ಎಚ್.ಕೆ.ದೇವರಾಜ್, ಚಂದ್ರಶೇಖರ್, ಗೋವಿಂದಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -