ತಾಲ್ಲೂಕಿನಾದ್ಯಂತ ನೀರಿನ ಅಭಾವ ಎದುರಾಗುತ್ತಿದ್ದಂತೆ ಹಲವೆಡೆ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದಾರೆ. ಹಲವಾರು ಪಂಚಾಯತಿಗಳಿಗೆ ಸೇರಿರುವ ಕೆಲ ಗ್ರಾಮಗಳಿಗೆ ಏಕಾಏಕಿ ನೀರು ನಿಂತು ಪಂಚಾಯತಿ ವತಿಯಿಂದಲೂ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಆದರೆ ಸಾವಿರ ಅಡಿ ಆಳದಲ್ಲಿ ನೀರು ಸಿಗುವುದೇ, ಸಿಕ್ಕರೆ ಫ್ಲೋರೈಡ್ ಅಂಶ ಇದೆಯೇ ಎಂಬೆಲ್ಲಾ ಸಮಸ್ಯೆಗಳು ಎದುರಾಗುತ್ತವೆ.
ಇದಕ್ಕೆ ಪರಿಹಾರವೆಂಬಂತೆ ತಾಲ್ಲೂಕಿನ ಮಳ್ಳೂರಿನಲ್ಲಿ ಪಂಚಾಯತಿಯವರು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅತ್ಯಾಧುನಿಕ ಕೊಳವೆ ಬಾವಿ ಕೊರೆಯುವ ಯಂತ್ರವನ್ನು ತರಿಸಿದ್ದಾರೆ. ಅಮೆರಿಕಾದಿಂದ ಬಂದಿರುವ ಏರ್ ಕಂಪ್ರೆಸರ್ ಸೇರಿದಂತೆ ಕೋಟ್ಯಾಂತರ ಬೆಲೆ ಬಾಳುವ ಯಂತ್ರದೊಂದಿಗೆ ಎಂಜಿನಿಯರುಗಳು ಹಾಗೂ ವಿಜ್ಞಾನಿಗಳ ತಂಡ ಕೂಡ ಇದೆ. ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ಸೂಚಿಸಿದ ಜಾಗದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುತ್ತಿದೆ. ಅರ್ಧ ಕಿ.ಮೀ ಆಳದವರೆಗೂ ನೆಲವನ್ನು ಕೊರೆಯುವ ಸಾಮರ್ಥ್ಯ ಹೊಂದಿರುವ ಯಂತ್ರ ಕೊರೆಯುತ್ತಾ ಹೋದಂತೆ ನೆಲದಾಳದ ಮಣ್ಣು, ಕಲ್ಲು, ನೀರನ್ನು ಎಂಜಿನಿಯರುಗಳು ಪರಿಶಿಲಿಸಿ ವರದಿ ತಯಾರಿಸುತ್ತಾರೆ. ನೆಲದಾಳದ ಬಿರುಕುಗಳು, ನೀರಿನ ಹರಿವು ಎಲ್ಲವನ್ನೂ ದಾಖಲಿಸುತ್ತಾ, ಈ ಯಂತ್ರದ ಮುಖೇನ ಸಿಕ್ಕ ನೀರು ಬಿರುಕುಗಳಲ್ಲಿ ಸೋರಿಕೆಯಾಗದಂತೆ ಸಿಮೆಂಟ್ ತಡೆಯನ್ನು ಕೂಡ ನಿರ್ಮಿಸುತ್ತಾರೆ. ಅತ್ಯಂತ ಗುಣಮಟ್ಟದ 10 ಅಂಗುಲ ವ್ಯಾಸದ ಕೇಸಿಂಗ್ ಪೈಪ್ ಅಳವಡಿಸುತ್ತಾರೆ. ನೀರಿನ ಗುಣಮಟ್ಟದ ವರದಿಯನ್ವಯ ಅದರ ಶುದ್ಧೀಕರಣಕ್ಕೂ ವಿಜ್ಞಾನಿಗಳು ಕ್ರಮ ಕೈಗೊಳ್ಳುತ್ತಾರೆ.
‘ನಮ್ಮ ಪಂಚಾಯತಿಯಲ್ಲಿ ಸುಮಾರು 13 ಕೊಳವೆ ಬಾವಿಗಳನ್ನು ಕೊರೆಸದರೂ ನೀರು ಸಿಕ್ಕಿಲ್ಲ. ಇದ್ದ ಕೆಲವು ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿ ಮಳ್ಳೂರು, ಅಂಗತಟ್ಟಿ, ಕಾಚಹಳ್ಳಿ, ಮುತ್ತೂರು ಗ್ರಾಮಗಳಿಗೆ ಏಕಾ ಏಕಿ ನೀರು ಸರಬರಾಜು ನಿಂತು ಸಾಕಷ್ಟು ತೊಂದರೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ ಅವರ ನೆರವಿನಿಂದ ಅತ್ಯಾಧುನಿಕ ಕೊಳವೆ ಬಾವಿ ಕೊರೆಯುವ ಯಂತ್ರವನ್ನು ತರಿಸಿದ್ದೇವೆ. ಮಳ್ಳೂರಿನ ಕೆರೆಯ ಅಂಗಳದಲ್ಲಿ ಕೊರೆಸುತ್ತಿದ್ದೇವೆ’ ಎಂದು ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್ ತಿಳಿಸಿದರು.
- Advertisement -
- Advertisement -
- Advertisement -
- Advertisement -