ನಗರದ ನೆಹರೂ ಕ್ರೀಡಾಂಗಣದಲ್ಲಿ ಸಾಕಷ್ಟು ಅವ್ಯವಸ್ಥೆಗಳಿದ್ದು ಅವುಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಬೇಕೆಂದು ಕ್ರೀಡಾಪಟುಗಳು ಯುವಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಧಿಕಾರಿ ಜಯಲಕ್ಷ್ಮಿ ಅವರಿಗೆ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣಕ್ಕೆ ಗುರುವಾರ ಭೇಟಿ ನೀಡಿದ್ದ ಅವರಿಗೆ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿನ ಅವ್ಯವಸ್ಥೆ, ಕಳಪೆ ಕಾಮಗಾರಿಯ ಹಾಗೂ ಇಲ್ಲಿನ ಅನೈರ್ಮಲ್ಯದ ಬಗ್ಗೆ ತೋರಿಸಿ ವಿವರಿಸಿದರು.
ಕ್ರೀಡಾಂಗಣವನ್ನು ರಾಜಕೀಯ ಕಾರ್ಯಕ್ರಮಗಳಿಗೆ, ಸಿನೆಮಾ ಕಾರ್ಯಕ್ರಮಗಳಿಗೆ ನೀಡುವಾಗ ಮುಚ್ಚಳಿಕೆಯನ್ನು ಬರೆಸಿಕೊಡಬೇಕು. ಅವರು ಕ್ರೀಡಾಂಗಣದಲ್ಲಿ ಹಾಳು ಮಾಡುವುದನ್ನು ಸರಿಪಡಿಸಲು ಹಣವನ್ನು ಪಡೆಯಬೇಕು. ಒಂದು ಬಾರಿ ಕಾರ್ಯಕ್ರಮ ನಡೆದರೆ ಕ್ರೀಡಾಪಟುಗಳಿ ಕನಿಷ್ಠ ಒಂದು ತಿಂಗಳು ಅತ್ತ ಸುಳಿಯಲು ಕಷ್ಟವಾಗುತ್ತದೆ. ಕ್ರೀಡಾಂಗಣಕ್ಕೆ ಕಾವಲು ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸುತ್ತಲಿನ ಮನೆಗಳವರಿಗೆ ಕಸ ಸುರಿಯುವ ಸ್ಥಳವಾಗಿದೆ. ಸರ್ಕಾರ ಲಕ್ಷಾಂತರ ಹಣ ಬಿಡುಗಡೆ ಮಾಡಿದ್ದರೂ ಅದರ ಸದುಪಯೋಗವಾಗಿಲ್ಲ. ಹೀಗಿದ್ದಾಗ ಕ್ರೀಡಾಪಟುಗಳು ಹೇಗೆ ತಾನೆ ಇಲ್ಲಿ ತರಬೇತಿ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಧಿಕಾರಿ ಜಯಲಕ್ಷ್ಮಿ ಮಾತನಾಡಿ, ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೊದಲ ಕಂತು 25 ಲಕ್ಷ ರೂಗಳು ಬಿಡುಗಡೆಯಾಗಿದೆ. ಈಗ ನಡೆದಿರುವ ಕೆಲಸದ ಗುಣಮಟ್ಟದ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ನಾವು ವರದಿ ಮಾಡಬೇಕಿದೆ. ತಾಲ್ಲೂಕು ಕ್ರೀಡಾಂಗಣ ಸಮಿತಿ ಅಧ್ಯಕ್ಷರನ್ನಾಗಿ ಶಾಸಕರನ್ನೇ ಆಯ್ಕೆ ಮಾಡಿ ಸರ್ಕಾರ ಆದೇಶ ಮಾಡಿದೆ. ಹಾಗಾಗಿ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗುವುದು. ಸಭೆಯ ನಡಾವಳಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಇಲ್ಲಿನ ಪರಿಸ್ಥಿತಿ ಹಾಗೂ ಕ್ರೀಡಾಪಟುಗಳ ಸಮಸ್ಯೆಯನ್ನು ಅವರಿಗೆ ತಿಳಿಸುತ್ತೇನೆ’ ಎಂದು ಹೇಳಿದರು.
ಕ್ರೀಡಾಂಗಣದ ಮೇಲ್ವಿಚಾರಕ ಶ್ರೀನಿವಾಸ್, ಕ್ರೀಡಾಪಟುಗಳಾದ ಟಿ.ಟಿ.ನರಸಿಂಹಪ್ಪ, ಎಸ್.ವಿ.ನಾಗರಾಜರಾವ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -