ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ ಹೇಳಿದರು.
ನಗರದ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ೨೦೧೫-–೧೬ ನೇ ಸಾಲಿನ ೧೫೧ ಮಂದಿ ರೈತರರಿಗೆ ೧.೫ ಕೋಟಿ ರೂಪಾಯಿಗಳ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಕೃಷಿ ಚಟುವಟಿಕೆಗಳಿಗಾಗಿ ಸಾಲಗಳನ್ನು ಪಡೆದುಕೊಂಡು, ನಿಗದಿತ ಸಮಯದಲ್ಲಿ ಮರುಪಾವತಿ ಮಾಡದೇ, ಸರ್ಕಾರ ಮನ್ನಾ ಮಾಡುತ್ತದೆಯೆಂಬ ಅಸಡ್ಡೆಯನ್ನು ತೋರಿಸಬಾರದು. ಸಾಲವನ್ನು ಯಾವ ಉದ್ದೇಶಗಳಿಗಾಗಿ ಪಡೆದುಕೊಳ್ಳುತ್ತೀರೊ ಅದೇ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಸಾಲ ಮರುಪಾವತಿ ಮಾಡಬೇಕು. ಈ ಭಾಗಕ್ಕೆ ನೀರಾವರಿ ಯೋಜನೆಗಳು ಜಾರಿಯಾಗದ ಹೊರತು, ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ಜೀವನಾಡಿಯಾಗಿದ್ದ ರೇಷ್ಮೆ ಉದ್ಯಮವೂ ಕೂಡಾ ತೆರೆಮರೆಗೆ ಸರಿಯುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ, ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ ಎಂದರು.
ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಸಿ.ಎಂ.ಗೋಪಾಲ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಂಡು ತೀರಾ ಸಂಕಷ್ಟಕ್ಕೆ ಸಿಲುಕಿಕೊಂಡು ಸಾಲಗಳನ್ನು ಮರುಪಾವತಿ ಮಾಡಲಾಗದೆ ಇರುವ ರೈತರು, ಬಡ್ಡಿಯನ್ನು ಹೊರತುಪಡಿಸಿ, ಅಸಲು ಮಾತ್ರ ಪಾವತಿ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ, ಪಿ.ಎಲ್.ಡಿ.ಬ್ಯಾಂಕಿನ ಮೂಲಕವೂ ಕೂಡಾ ರೇಷ್ಮೆಮನೆ ನಿರ್ಮಾಣ, ಕಾಂಡ ಮೇಯಿಸುವ ಪದ್ದತಿ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಟ್ರ್ಯಾಕ್ಟರ್ಗಳ ಖರೀದಿಗಾಗಿ ಸಾಲಗಳನ್ನು ನೀಡಲಾಗುತ್ತಿದೆ ಎಂದರು.
ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ರವಿ, ನಿರ್ದೇಶಕರಾದ ರಮಾದೇವಿ, ಮಯೂರ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಕ್ಯಾತಪ್ಪ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -