ನಗರದಲ್ಲಿ ಪರಿಸರ ಮಾಲಿನ್ಯವಾಗದಂತೆ ತಡೆಗಟ್ಟುವಂತಹ ಜವಾಬ್ದಾರಿಯನ್ನು ನಗರಸಭೆಯ ಅಧಿಕಾರಿಗಳದ್ದು. ಅವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷ ಮಂಜುನಾಥ್ ಹೇಳಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ಮಾಲಿನ್ಯ ನಿಯಂತ್ರಣಾ ಮಂಡಳಿ, ರೇಷ್ಮೆಇಲಾಖೆ, ಹಾಗೂ ನಗರಸಭೆ ಶಿಡ್ಲಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ರೀಲರುಗಳ ಸಭೆಯಲ್ಲಿ ಅವರು ಮಾತನಾಡಿದರು.
ರೇಷ್ಮೆನೂಲು ಬಿಚ್ಚಾಣಿಕೆ ಮಾಡುವಂತಹ ರೀಲರುಗಳು, ತಾವು ಬಳಕೆಮಾಡಿದಂತಹ ನೀರು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದರಿಂದ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಉಪಯೋಗಿಸಿದ ನೀರು ರೇಷ್ಮೆ ತ್ಯಾಜ್ಯದೊಂದಿಗೆ ನೇರವಾಗಿ ಚರಂಡಿಗಳಲ್ಲಿ ಸೇರುವುದರಿಂದ ಮತ್ತಷ್ಟು ಮಾಲಿನ್ಯವಾಗಲು ಕಾರಣವಾಗುತ್ತದೆ. ರೀಲರುಗಳು ನೂಲುಬಿಚ್ಚಾಣಿಕೆಗೆ ಉಪಯೋಗ ಮಾಡಿದಂತಹ ನೀರಿನಿಂದಾಗುವಂತಹ ದುಷ್ಪರಿಣಾಮಗಳ ಬಗ್ಗೆಯೂ ಚಿಂತನೆ ನಡೆಸಬೇಕು. ತೊಟ್ಟಿಗಳನ್ನು ನಿರ್ಮಾಣ ಮಾಡಿ, ಹಂತ ಹಂತವಾಗಿ ನೀರನ್ನು ಹೊರಬಿಡುವುದರಿಂದಲೂ ಜಲಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಈ ಹಿಂದೆ ಸಬೆಯನ್ನು ನಡೆಸಿ ಕೆಲವು ಬದಲಾವಣೆಗಳ ಬಗ್ಗೆ ಚರ್ಚೆ ಮಾಡಲಾಗಿತ್ತಾದರೂ ನಗರಸಭೆಯವರು ಅದನ್ನು ಕಾರ್ಯಗತಗೊಳಿಸಲಿಲ್ಲ, ನಗರದಲ್ಲಿ ಉತ್ಪತ್ತಿಯಾದ ತ್ಯಾಜ್ಯನೀರನ್ನು ಒಂದು ಕಡೆಗೆ ಶೇಖರಣೆ ಮಾಡಿದರೆ, ವೈಜ್ಞಾನಿಕವಾಗಿ ಹೊಸ ತಂತ್ರಜ್ಞಾನದ ಮೂಲಕ ನೀರನ್ನು ಮರುಬಳಕೆ ಅಥವಾ ಅಂತರ್ಜಲವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ನಗರದಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರೀಲರುಗಳು ಗೂಡಿನ ಶೇಖರಣೆ, ಪ್ಯೂಪಾಗಳ ನಿರ್ವಹಣೆ ಹಾಗೂ ತ್ಯಾಜ್ಯನೀರಿನ ವಿಲೇವಾರಿ ಎಲ್ಲವನ್ನೂ ಜಾಗದ ಕೊರತೆಯಿಂದಾಗಿ ಒಂದೇ ಕಡೆಯಲ್ಲಿ ಮಾಡಿಕೊಳ್ಳಬೇಕು. ಮಾರುಕಟ್ಟೆಯ ಆವರಣದಲ್ಲೆ ಆರೋಗ್ಯಕರವಾದ ವಾತಾವರಣವಿಲ್ಲ, ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.
ರೇಷ್ಮೆಇಲಾಖೆಯ ಉಪನಿರ್ದೆಶಕ ನಾಗಭೂಷಣ್, ಶಿಡ್ಲಘಟ್ಟ ಮಾರುಕಟ್ಟೆಯ ಉಪನಿರ್ದೆಶಕ ರತ್ನಯ್ಯಶೆಟ್ಟಿ, ವಿಜ್ಞಾನಿ ಮಹೇಶ್, ನಗರಸಭೆ ಪರಿಸರ ಎಂಜಿನಿಯರ್ ದಿಲೀಪ್, ರಾಮ್ಕುಮಾರ್, ನರಸಿಂಹಮೂರ್ತಿ, ರೀಲರುಗಳಾದ ರಾಮಕೃಷ್ಣಪ್ಪ, ನಾಗನರಸಿಂಹ, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -