24.1 C
Sidlaghatta
Friday, November 14, 2025

ಪೊರಕೆ ಕಡ್ಡಿ ಸಂಗ್ರಹಿಸುವ ಕಾಯಕದಲ್ಲಿ ಉತ್ಸಾಹಿ ವೆಂಕಟಮ್ಮ

- Advertisement -
- Advertisement -

“ವಯಸ್ಸಾಯ್ತು ಅಂತ ಸುಮ್ನಿರೋಕಾಯ್ತದ, ಕಷ್ಟಪಟ್ಟು ದುಡಿದ್ರೇನೇ ಬದುಕು ಸಾಗೋದು’ ಎನ್ನುವ ಅಪ್ಪೇಗೌಡನಹಳ್ಳಿಯ ವೆಂಕಟಮ್ಮ ವಯಸ್ಸಾಗುವುದು ದೇಹಕ್ಕಷ್ಟೆ ಮನಸ್ಸಿಗಲ್ಲ ಎಂಬುದನ್ನು ತನ್ನ ಕಾಯಕ ಧರ್ಮದಿಂದ ತಿಳಿಸುತ್ತಾರೆ.
ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುವ ಈ ವೃದ್ಧೆ ಭಾನುವಾರ ಗ್ರಾಮದ ಹೊರವಲಯದಲ್ಲಿ ಪೊರಕೆ ಕಡ್ಡಿಗಳನ್ನು ಕೀಳುವ ಕಾರ್ಯದಲ್ಲಿ ನಿರತರು.
‘ಹಿಂದೆ ಬೀಡುಬಿಟ್ಟ ಜಮೀನುಗಳು ಹೆಚ್ಚಾಗಿರುತ್ತಿದ್ದವು, ಪೊರಕೆ ಕಡ್ಡಿಗಳೂ ಹುಲುಸಾಗಿ ಬೆಳೆಯುತ್ತಿದ್ದವು. ಈಗ ಸಂಗ್ರಹಣೆಯೇ ಬಲು ಕಷ್ಟ. ಈ ಬಾರಿ ಮಳೆ ಸ್ವಲ್ಪ ಚೆನ್ನಾಗಿ ಆಗಿದ್ದರಿಂದ ಒಂದಷ್ಟು ಸಂಗ್ರಹಿಸುವಂತಾಗಿದೆ. ಮಳೆ ಚೆನ್ನಾಗಿ ಆದರೆ ಮಾತ್ರ ಗಟ್ಟಿ ಮತ್ತು ಉದ್ದ ಕಡ್ಡಿಗಳು ಸಿಗುತ್ತವೆ’ ಎಂಬುದು ವೆಂಕಟಮ್ಮನ ಅನುಭವದ ನುಡಿಗಳು.
‘ಒತ್ತೊತ್ತಾಗಿದ್ದರೆ ದಿನಕ್ಕೆ ೧೫ ಪೊರಕೆಗಳಿಗಾಗುವಷ್ಟು ಕಡ್ಡಿಗಳನ್ನು ಸಂಗ್ರಹಿಸುತ್ತೇನೆ, ಇಲ್ಲದಿದ್ದರೆ ಹತ್ತು ಪೊರಕೆಗಳಷ್ಟಾದರೂ ಸಂಗ್ರಹವಾಗುತ್ತದೆ. ಕಿತ್ತ ಕಡ್ಡಿಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಅವುಗಳ ಊಗನ್ನು ಉದುರಿಸಬೇಕು. ಇದು ಗಾಳಿಯಲ್ಲಿ ಪ್ರಸಾರಗೊಂಡು ತನ್ನ ಬಾಣದಂತಹ ಚೂಪುತುದಿಯಿಂದ ತೆಳುಚರ್ಮದ ಪ್ರಾಣಿಗಳಿಗೆ ಚುಚ್ಚಿ ನೋವನ್ನುಂಟುಮಾಡುತ್ತದೆ ಎಂದು ಮುಳ್ಳು, ಕಳ್ಳಿ, ಪೊದೆಗಳ ಮೇಲೆ ಅದನ್ನು ಉದುರಿಸಬೇಕು. ನಂತರ ಅದಕ್ಕೆ ಬೆಂಕಿ ಹಚ್ಚಿ ಸುಡಬೇಕು’ ಎಂದು ಅವರು ಹೇಳಿದರು.
‘ಹಿಂದೆ ಹೊಲಗಳ ಬದುಗಳು, ಕರಾಬು ಕಾಲುವೆ, ಕಲ್ಲುಗುಟ್ಟಗಳು ಪೊರಕೆ ಹುಲ್ಲಿಗೆ ನೆಲೆಯಾಗಿದ್ದವು. ಕಣಗಳಿದ್ದ ಕಾಲದಲ್ಲಿ ಕಣ ಆರಂಭದಿಂದ ಅಂತ್ಯದವರೆಗೆ ಪೊರಕೆಗೆ ನಿರಂತರ ಕೆಲಸ ಇರುತ್ತಿತ್ತು. ಇದರಿಂದಾಗಿ ಉಪಕಸುಬಾಗಿ ಕೂಲಿ ನಾಲಿಯ ನಡುವೆ ಕಡ್ಡಿ ಸಂಗ್ರಹಿಸಿ ಊಗು (ಹೂ) ಉದುರಿಸಿ ಒಂದಷ್ಟು ಕೈಕಾಸು ಸಂಪಾದಿಸುತ್ತಿದ್ದವರಿದ್ದರು. ಹಿಂದೆ ಒಂದೆರಡು ಗಂಟೆಗಳಲ್ಲಿ ಸಂಗ್ರಹಿಸಬಹುದಾಗಿದ್ದ ಕಡ್ಡಿ ಇಂದು ಹಿಡೀ ಹಗಲನ್ನೇ ತೆಗೆದುಕೊಳ್ಳುವಷ್ಟು ವಿರಳವಾಗಿ ಲಭ್ಯವಾಗುತ್ತಿದೆ. ಕಡ್ಡೀ ಕಿತ್ತು ಒಣಗಿಸಿ, ಊಬು ಉದುರಿಸಿ ಕಟ್ಟು ಕಟ್ಟಿ ಮಾರುವ ಕ್ಲಿಷ್ಟ ಕೆಲಸಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಒಂದೆಡೆ ಕಷ್ಟ ಪಡುವವರೇ ವಿರಳವಾಗುತ್ತಿರುವ ದಿನಗಳಲ್ಲಿ ವೆಂಕಟಮ್ಮ ಅವರನ್ನು ಕಂಡಾಗ ಜೀವನೋತ್ಸಾಹ ಮೂಡುತ್ತದೆ” ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!