ಅಶುದ್ಧವಾದ ನೀರು ಸೇವನೆ, ಹಾಗೂ ರಾಸಾಯನಿಕ ಮಿಶ್ರಿತ ಅಂಶಗಳುಳ್ಳ ಆಹಾರ ಪದಾರ್ಥಗಳಿಂದ ಪ್ಲೋರೋಸಿಸ್ ಕಾಣಿಸಿಕೊಳ್ಳುತ್ತಿದ್ದು, ಜನರು ಜಾಗೃತರಾಗಬೇಕು ಎಂದು ತಾಲ್ಲೂಕು ಆರೋಗ್ಯ ಇಲಾಖೆ ಆಡಳಿತಾಧಿಕಾರಿ ಡಾ.ಅನಿಲ್ ಕುಮಾರ್ ಹೇಳಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪ್ಲೋರೋಸಿಸ್ ತಡೆ ಹಾಗೂ ನಿವಾರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆ. ಕಟ್ಟೆ, ಕೊಳವೆಬಾವಿ ಸೇರಿದಂತೆ ನಾನಾ ಮೂಲಗಳಿಂದ ನೀರು ಲಭ್ಯವಾಗುತ್ತದೆ. ಆ ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್, ಕ್ಲೋರೈಡ್ ಹಾಗೂ ಐರನ್ ಸೇರಿದಂತೆ ನಾನಾ ರಾಸಾಯನಿಕ ಅಂಶಗಳು ಸೇರುತ್ತವೆ. ಭೂಮಿಯ ಆಳಕ್ಕೆ ಹೋದಷ್ಟು ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್ ಸೇರಿದಂತೆ ರಾಸಾಯನಿಕ ಅಂಶಗಳು ಹೆಚ್ಚು ಸೇರಿಕೊಳ್ಳುತ್ತವೆ. ಹೀಗಾಗಿ ಆಳವಾದ ಬಾವಿ ಹಾಗೂ ಕೊಳವೆಬಾವಿ ನೀರು ಬಳಸುವಾಗ ಎಚ್ಚರವಿರಲಿ, ನಾಗರಿಕರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು.
ಕುಡಿಯುವ ನೀರು, ಆಹಾರ, ಕೆಲ ಔಷಧಿಗಳ ಸೇವನೆ, ಕಾರ್ಖಾನೆಯಿಂದ ಹೊರಹೊಮ್ಮುವ ದೂಳು, ಹೊಗೆ ಮುಂತಾದವುಗಳ ಮೂಲಕ ಫ್ಲೋರೈಡ್ ಅಂಶಗಳು ದೇಹದೊಳಗೆ ಪ್ರವೇಶಿಸುತ್ತವೆ. ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಪ್ಲೋರೋಸಿಸ್ ಕಾಯಿಲೆಯು ಮನುಷ್ಯನನ್ನು ದುರ್ಬಲಗೊಳಿಸುತ್ತದೆ ಅಲ್ಲದೆ ಬೇರೆ ಬೇರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಮಕ್ಕಳಲ್ಲದೆ ಹಿರಿಯರು ಕೂಡ ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದರು.
ಪ್ಲೋರೊಸಿಸ್ ನಿವಾರಣಾ ಜಿಲ್ಲಾ ತಜ್ಞ ವಿನೋದ್ ಮಾತನಾಡಿ, ತಾಲ್ಲೂಕಿನ ಸಾದಲಿ ಮತ್ತು ಗಂಜಿಗುಂಟೆಗಳಲ್ಲಿ ಪ್ಲೋರೋಸಿಸ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ನಾಗರಿಕರು ಈ ಕುರಿತು ಜಾಗೃತರಾಗಬೇಕು. ಫ್ಲೋರೋಸಿಸ್ ಸಮಸ್ಯೆಗೆ ಒಳಗಾಗಿರುವವರಿಗೆ ಉಚಿತ ಚಿಕಿತ್ಸೆಯೊಂದಿಗೆ ಕೌನ್ಸೆಲಿಂಗ್ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಆಹಾರ ಕ್ರಮಗಳ ಕುರಿತು ಮಾಹಿತಿ ನೀಡುವುದರ ಜತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣಾ ಕಾರ್ಯಕ್ರಮದ ಸಹಯೋಗದಲ್ಲಿ ಇಲಾಖೆಯು ಕೈಗೊಂಡಿರುವ ಈ ವಿನೂತನ ಪ್ರಯೋಗದಿಂದ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವುದನ್ನು ಪತ್ತೆ ಮಾಡಿ, ಆಯಾ ಗ್ರಾಮದ ಜನರಿಗೆ ಆ ನೀರನ್ನು ಕುಡಿಯದಂತೆ ಸಲಹೆ ನೀಡಲಾಗುತ್ತಿದೆ.
ಬಹುತೇಕ ಗ್ರಾಮಗಳಲ್ಲಿ ಕೊಳವೆಬಾವಿಯಿಂದ ಪೂರೈಕೆಯಾಗುವ ನೀರು ಸುಮಾರು ಒಂದು ಸಾವಿರ ಅಡಿಗಳ ಆಳದಿಂದ ಬರುತ್ತಿದ್ದು, ಅದರಲ್ಲಿ ಸಹಜವಾಗಿ ಫ್ಲೋರೈಡ್ ಅಂಶ ಇರುತ್ತದೆ. ನೀರಿನಲ್ಲಿ 1 ಪಿಪಿಎಂ (10 ಲಕ್ಷದಲ್ಲಿ 1 ಭಾಗ) ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಅಂಶವಿದ್ದಲ್ಲಿ, ಕೆಲವೇ ದಿನಗಳಲ್ಲಿ ವ್ಯಕ್ತಿಯಲ್ಲಿ ಪ್ಲೋರೋಸಿಸ್ ಕಾಯಿಲೆ ಕಾಣಿಸಿಕೊಳ್ಳುತ್ತದೆ ಈ ಬಗ್ಗೆ ನಾಗರಿಕರು ಎಚ್ಚರದಿಂದಿರಬೇಕು ಎಂದರು.
ತಪಾಸಣೆಯಲ್ಲಿ ಭಾಗವಹಿಸಿದ್ದ ರೋಗಿಗಳಿಗೆ ಪ್ರಾತ್ಯಕ್ಷಿಕೆ ನಡೆಸುವ ಮೂಲಕ ಪ್ಲೋರೋಸಿಸ್ ಕಾಯಿಲೆಯ ಕುರಿತು ವಿತರಣೆ ನೀಡಿದರು. ಉಚಿತ ತಪಾಸಣೆ ಮಾಡಿದರು.
ಡಾ.ನಮಿತಾ, ಆರೋಗ್ಯ ತಪಾಸಕರಾದ ಭಾನುಶ್ರೀ, ಗಾಯಿತ್ರಿ, ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
- Advertisement -
- Advertisement -
- Advertisement -