ಅರಣ್ಯದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು, ಪರಿಸರ ಕಾಳಜಿಯಿಂದ ಅರಣ್ಯ ಇಲಾಖೆ ಅಡುಗೆ ಅನಿಲ ವಿತರಿಸುತ್ತಿದೆ. ಅರಣ್ಯ ಇಲಾಖೆಯ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕಾಡನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ವರದನಾಯಕನಹಳ್ಳಿ ಗೇಟ್ ಬಳಿಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ೨೦೧೭-೧೮ ನೇ ಸಾಲಿನ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿಯಲ್ಲಿ ಉಚಿತ ಅನಿಲ ಸಂಪರ್ಕ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಡುಗೆ ಮಾಡಲು ಅರಣ್ಯದೊಳಗಿನ ಉರುವಲುಗಳನ್ನು ಸಂಗ್ರಹಿಸುತ್ತಾರೆ. ಇದನ್ನು ತಡೆಗಟ್ಟಲು ಉಚಿತವಾಗಿ ಅನಿಲ ಸಿಲಿಂಡರ್ ಮತ್ತು ಸ್ಟೌ ವಿತರಿಸಲಾಗಿದೆ. ಅಡುಗೆ ಅನಿಲವನ್ನು ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಎಸ್ಸಿಪಿ ಹಾಗು ಎಸ್ಟಿಪಿ ಯೋಜನೆಯಡಿ ತಾಲ್ಲೂಕಿನ ಸುಮಾರು ೬೦೦ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲಿದ್ದು ಈದಿನ ಸಾಂಕೇತಿಕವಾಗು ಸುಮಾರು ೧೪೭ ಮಂದಿಗೆ ವಿತರಿಸಲಾಗುತ್ತಿದೆ ಎಂದರು.
ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರ್ ವಿತರಿಸಲಾಗುವುದು. ಅರಣ್ಯದಲ್ಲಿ ನಡೆಯುವ ಕಳ್ಳತನದ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು. ಅರಣ್ಯ ಇಲಾಖೆಯಿಂದ ನೀಡುವ ಗಿಡಗಳನ್ನು ಜನರು ಬೆಳೆಸುವ ಮೂಲಕ ಪರಿಸರವನ್ನು ಹಸಿರುಮಯಗೊಳಿಸಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಅಫ್ಸರ್ಪಾಷ, ಚಿಂತಾಮಣಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಚಂದ್ರಶೇಖರಯ್ಯ, ತಾಲೂಕು ಪ್ರಭಾರಿ ಉಪವಲಯ ಅರಣಾಧಿಕಾರಿ ಟಿ.ಅಶ್ವತ್ಥಪ್ಪ, ಮುಖಂಡರಾದ ಲಕ್ಷ್ಮಿನಾರಾಯಣ, ಇಂಡೇನ್ ಗ್ಯಾಸ್ ಏಜೆನ್ಸಿ ಮಾಲೀಕ ನಾಗರಾಜ್, ವ್ಯವಸ್ಥಾಪಕ ಪ್ರಕಾಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -