ಬಯಲು ಸೀಮೆಯ ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಘಟನಾ ಸಂಚಾಲಕ ಮಳ್ಳೂರು ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ನೀರಿಗಾಗಿ ಜನಾಂದೋಲನ ನಡೆಸಬೇಕೆಂದು ಕರೆ ನೀಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಾರ್ಗದರ್ಶನದಲ್ಲಿ ಯುವಶಕ್ತಿ ನಡೆಸುತ್ತಿರುವ ಬಯಲುಸೀಮೆಯ ರೈತ ಮಕ್ಕಳ ಬೃಹತ್ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿದಂತೆ ಬಯಲು ಸೀಮೆಯ ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟ ಕುಸಿದು ನೀರಿಗಾಗಿ ಹಾಹಾಕಾರ ಉಂಟಾಗಿ ವಿಷಪೂರಿತ ನೀರು ಸೇವಿಸುತ್ತಿದ್ದರು ಸಹ ಜನರ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ನಿಷ್ಕ್ರೀಯಗೊಂಡಿದೆ. ಜನಪ್ರತಿನಿಧಿಗಳು ಉದಾಸೀನ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ತ್ಯಾಜ್ಯ ನೀರನ್ನು ಜಿಲ್ಲೆಯ ಕೆರೆಗಳನ್ನು ಹರಿಸುವ ಯೋಜನೆಯನ್ನು ಕೈಬಿಡಬೇಕು. ಜಿಲ್ಲೆಯಲ್ಲಿರುವ ಕಾಲುವೆ, ರಾಜುಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವುಗೊಳಿಸಿ ೪೦೦೦ ಕೆರೆಗಳನ್ನು ಪುನಶ್ಚೇತನಗೊಳಿಸಬೇಕು. ಮಾರ್ಚ್ ೧೪ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಬಯಲುಸೀಮೆಯ ರೈತ ಮಕ್ಕಳ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ಪ್ರವಾಸಿ ಮಂದಿರದಿಂದ ದ್ವಿಚ್ರಕ ವಾಹನದಲ್ಲಿ ಬೈಕ್ ರ್ಯಾಲಿ ನಡೆಸಿದ ಯುವಶಕ್ತಿ ಕಾರ್ಯಕರ್ತರು, ರೈತ ಸಂಘದ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಶಾಶ್ವತ ನೀರಾವರಿ ಯೋಜನೆಯ ಮಹತ್ವದ ಕುರಿತು ಜನಜಾಗೃತಿ ಮೂಡಿಸಿದರು,
ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಚಿಕ್ಕದಾಸರಹಳ್ಳಿ ದಾಮೋದರ್, ಮುನಿನಂಜಪ್ಪ, ಕೃಷ್ಣಪ್ಪ, ಪ್ರತಾಪರೆಡ್ಡಿ, ವಿಜಯಬಾವರೆಡ್ಡಿ, ಶಿವಕುಮಾರ್, ಶಿವಪ್ರಸಾದ್, ಬಾಬು, ವೇಣುಗೋಪಾಲ್, ಶಿವಾರೆಡ್ಡಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -