ತಾಲ್ಲೂಕಿನಲ್ಲಿ ಇದುವರೆಗೂ ಗ್ರಾಮ ಪಂಚಾಯತಿ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಸ್ಪರ್ಧಿಸುತ್ತಿರಲಿಲ್ಲ. ಆದರೆ ಈ ಬಾರಿ 186 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿರುವುದು ಆಶಾದಾಯಕ ಬೆಳವಣಿಗೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು 362 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈ ಬಾರಿ ತಾಲ್ಲೂಕಿನಲ್ಲಿ ನಾಮಪತ್ರ ಸಲ್ಲಿಸಿದ್ದು, ಈಗ 186 ಕ್ಕೂ ಹೆಚ್ಚು ಮಂದಿ ಕಣದಲ್ಲಿದ್ದಾರೆ. ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುತ್ತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಬೆಂಬಲವಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸಿ ವಿಜೇತರಾಗುವಂತೆ ಅಭ್ಯರ್ಥಿಗಳಿಗೆ ಕರೆ ನೀಡಿದರು.
ದೇಶಾದ್ಯಂತೆ ನದಿ ಜೋಡಣೆಯು ವಾಜಪೇಯಿಯವರ ಕನಸಾಗಿದ್ದು, ಅದರ ಕುರಿತಂತೆ ಸಮೀಕ್ಷೆ ಹಾಗೂ ಯೋಜನೆಯ ರೂಪುರೇಷೆ ತಯಾರಾಗಿದೆ. ಮೋದಿಯವರು ಅದನ್ನು ಶೀಘ್ರವಾಗಿ ಪ್ರಾರಂಭಿಸಲಿದ್ದು, ಬಯಲು ಸೀಮೆಯ ಜನರಿಗೆ ವರದಾನವಾಗಲಿದೆ. ಭೂ ಕಾಯ್ದೆಯ ಉದ್ದೇಶವಿರುವುದು ಸಾರ್ವಜನಿಕ ಉಪಯುಕ್ತ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿ ಮಾತ್ರ. ಅದರಿಂದ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ರಿಯಲ್ ಎಸ್ಟೇಟ್ ಮಾಲೀಕರಿಗೆ ಅನುಕೂಲ ಮಾಡಲೆಂದು ಈ ಕಾಯ್ದೆ ಮಾಡಿಲ್ಲ. ಈ ಬಗ್ಗೆ ರೈತರಿಗೆ ಅರ್ಥ ಮಾಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ರೈತರಿಗೆ ಉಚಿತ ವಿದ್ಯುತ್ ಎಂದು ಆಮಿಷ ತೋರಿ ವಿದ್ಯುತ್ ನೀಡದೆ, ಲಾಟರಿ ದಂಧೆಯಲ್ಲಿ ಶಾಮೀಲಾದ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ. ದಕ್ಷ ಅಧಿಕಾರಿ ಡಿ.ಕೆ.ರವಿಯವರ ನಡತೆಯ ಮೇಲೆ ಕಳಂಕ ಬರುವಂತೆ ಮಾತನಾಡಿದ ಮುಖ್ಯಮಂತ್ರಿಯವರು ಕ್ಷಮಾಪಣೆ ಕೇಳಬೇಕು ಎಂದರು.
ಈ ಸಂದರ್ಭದಲ್ಲಿ ಚೀಮಂಗಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರ್ ಮತ್ತು ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಅರಿಕೆರೆ ಮುನಿರಾಜು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾ ಉಸ್ತುವಾರಿ ಕಾಂತರಾಜು, ಸಂಘಟನಾ ಕಾರ್ಯದರ್ಶಿ ರವೀಂದ್ರ, ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಲೋಕೇಶ್ಗೌಡ, ರಮೇಶ್ ಬಾಯರಿ, ದಾಮೋದರ್, ಮುನಿರತ್ನಮ್ಮ, ಅಶ್ವಕ್ ಪಾಷ, ಶಿವಕುಮಾರಗೌಡ, ಸೋಮನಾಥ, ನಂದೀಶ, ಮುನಿರಾಜು, ಅನಿಲ್ಕುಮಾರ್, ರತ್ನಮ್ಮ, ಮಂಜುಳಮ್ಮ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -