ಸೃಜನಶೀಲ ಹವ್ಯಾಸವನ್ನು ಹೊಂದಿರುವ ನಗರದ ಇಬ್ಬರು ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ.
ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿರುವ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ ನಿವಾಸಿ ಅಜಿತ್ ಕೌಂಡಿನ್ಯ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಡಿ.ಜಿ.ಮಲ್ಲಿಕಾರ್ಜುನ ಅವರ ಚಿತ್ರಗಳ ಕಲಾಪ್ರದರ್ಶನವನ್ನು ಭೂತಾನ್ ದೇಶದಲ್ಲಿ ಆಯೋಜಿಸಲಾಗಿದೆ. ಭೂತಾನ್ ದೇಶದ ರಾಜಧಾನಿ ಥಿಂಪು ನಗರದ ‘ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ನ ಕಲಾ ಗ್ಯಾಲರಿಯಲ್ಲಿ ಮಾರ್ಚ್ 4 ರಿಂದ 6 ರವರೆಗೂ ಮೂರು ದಿನಗಳ ಕಾಲ ಅವರ ಕಲಾ ಪ್ರದರ್ಶನ ನಡೆಯಲಿದೆ.
ಭಾರತ ತನ್ನ ಗಡಿ ದೇಶಗಳಾದ ಬಾಂಗ್ಲಾದೇಶ, ಬರ್ಮಾ, ನೇಪಾಳ, ಚೀನಾ, ಪಾಕಿಸ್ತಾನಗಳೊಂದಿಗೆ ಹಲವಾರು ತಕರಾರುಗಳನ್ನು ಹೊಂದಿದೆ. ಆದರೆ ಇವೆಲ್ಲವುಗಳ ಅಪವಾದದಂತೆ ಭೂತಾನ್ ಭಾರತಕ್ಕೆ ಆಪ್ತಮಿತ್ರನಂತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭೇಟಿ ನೀಡಿದ ಮೊಟ್ಟಮೊದಲ ರಾಷ್ಟ್ರ ಭೂತಾನ್. ಪ್ರಪಂಚದಲ್ಲೇ ಅತ್ಯಂತ ಸಂತುಷ್ಟ ಜನರಿರುವ ದೇಶ ಎನ್ನುವುದು ಭೂತಾನ್ನ ಅಗ್ಗಳಿಕೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಉಳಿಸಿಕೊಂಡಿದೆ. ಎಲ್ಲಾ ದೇಶಗಳೂ ತಮ್ಮ ಪ್ರಗತಿಯನ್ನು ತಲಾದಾಯದಲ್ಲಿ ಅಳೆದರೆ, ಭೂತಾನ್ ತನ್ನ ಪ್ರಗತಿಯನ್ನು ರಾಷ್ಟ್ರೀಯ ಸಂತಸ ಸೂಚ್ಯಂಕದಲ್ಲಿ (ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್) ಕಾಣುತ್ತದೆ.
ಭಾರತ ಮತ್ತು ಭೂತಾನ್ ಸಂಬಂಧಗಳನ್ನು ಸಾಂಸ್ಕೃತಿಕವಾಗಿ ಬೆಸೆಯುವ ಹಲವಾರು ಕಾರ್ಯಕ್ರಮಗಳನ್ನು ಭೂತಾನ್ ರಾಜಧಾನಿ ಥಿಂಪು ನಗರದ ‘ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ ಆಯೋಜಿಸುತ್ತಿದ್ದು, ಶಿಡ್ಲಘಟ್ಟದ ಕಲಾವಿದರ ಪ್ರದರ್ಶನವೂ ಅದರಲ್ಲಿ ಸೇರಿದೆ.
ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿರುವ ಅಜಿತ್ ಕೌಂಡಿನ್ಯ ಅವರ ಮುಖಪುಟ ವಿನ್ಯಾಸಗಳು, ಡಿ.ಜಿ.ಮಲ್ಲಿಕಾರ್ಜುನ ಅವರ ವನ್ಯಜೀವಿ, ಭಾವಾಭಿವ್ಯಂಜಕ, ಹಕ್ಕಿಗಳ ಮತ್ತು ಮ್ಯಾಕ್ರೋ ಛಾಯಾಚಿತ್ರಗಳ ಪ್ರದರ್ಶನವು ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಕೊಂಡಿಯಾಗುತ್ತಿದೆ.
‘ವಿದೇಶದಲ್ಲಿ ಕಲಾ ಪ್ರದರ್ಶನ ನಡೆಸುವುದು ಅದರಲ್ಲೂ ನಮ್ಮ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಭೂತಾನ್ ರಾಜಧಾನಿ ಥಿಂಪು ನಗರದ ‘ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ಗೆ ನಾವು ಕೆ.ಎಸ್.ಎಂ.ಟ್ರಸ್ಟ್ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಿ ತೆರಳುತ್ತಿದ್ದು, ಡಾ.ಎಂ.ಬೈರೇಗೌಡ ಅವರ ‘ಸೋರೆ ಬುರುಡೆ’, ‘ಕಿನ್ನುಡಿಯ ಬೆಳಕಲ್ಲಿ’ ಮತ್ತು ‘ಸ್ವಪ್ನಸಿದ್ಧಿ’ ಎಂಬ ಕನ್ನಡ ಜನಪದ ನಾಟಕಗಳು, ಛಾಯಾಚಿತ್ರಗಳ ಹಾಗೂ ಮುಖಪುಟ ವಿನ್ಯಾಸಗಳ ಪ್ರದರ್ಶನವನ್ನು ನಡೆಸುತ್ತೇವೆ. ‘ಭಾರತ ಭೂತಾನ್ ಸ್ನೇಹ ಸಂಸ್ಕೃತಿ’ ಎಂಬ ನಮ್ಮ ಮೂರು ದಿನಗಳ ಸಾಂಸ್ಕೃತಿಕ ಪ್ರದರ್ಶನದ ನಡುವೆ ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ, ಡಿ.ಜಿ.ಮಲ್ಲಿಕಾರ್ಜುನ ಅವರು ಕನ್ನಡದಲ್ಲಿ ಬರೆದಿರುವ, ಸೌಮ್ಯ ಅವರ ಇಂಗ್ಲಿಷ್ ಅನುವಾದದ ‘ಭೂತಾನ್– ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್’ ಎಂಬ ಪ್ರವಾಸ ಕಥನವನ್ನೂ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕ್ರಮವನ್ನು ಭೂತಾನ್ ದೇಶದಲ್ಲಿನ ಭಾರತೀಯ ರಾಯಭಾರಿ ಗೌತಮ್ ಬಂಬಾವಾಲೆ ಉದ್ಘಾಟಿಸಲಿದ್ದಾರೆ’ ಎಂದು ಅಜಿತ್ ಕೌಂಡಿನ್ಯ ಮತ್ತು ಡಿ.ಜಿ.ಮಲ್ಲಿಕಾರ್ಜುನ ತಿಳಿಸಿದರು.
- Advertisement -
- Advertisement -
- Advertisement -
- Advertisement -