ಭೂ ಅಕ್ರಮ ಸಕ್ರಮ ಸಮಿತಿಗೆ ಶಾಸಕರ ಅಧ್ಯಕ್ಷತೆಯ ಬದಲು ಉಪ ವಿಭಾಗಾಧಿಕಾರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಮತ್ತು ವಸತಿ ರಹಿತ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಜುಲೈ 20 ರ ಬುಧವಾರದಂದು ತಾಲ್ಲೂಕು ಕಚೇರಿಯ ಆವರಣದಲ್ಲಿ ಧರಣಿಯನ್ನು ನಡೆಸುತ್ತೇವೆ. ಅವಕಾಶ ವಂಚಿತರಿಗೆ, ಮಹಿಳೆಯರಿಗೆ ಜಮೀನೇ ಅಧಿಕಾರ. ಇದರಿಂದ ಅವರ ಜೀವನದಲ್ಲಿ ಗುಣಮಟ್ಟ ಸುಧಾರಿಸಲು ಸಾಧ್ಯ. ನೂರಾರು ಎಕರೆ ಭೂಮಿಯನ್ನು ಭೂ ಕಬಳಿಕೆದಾರರು ಕಾನೂನು ಭಯವಿಲ್ಲದೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ಭೂಗಳ್ಳರ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಬೇಕೆಂದು ಆಗ್ರಹಿಸಿದರು.
ಇದುವರೆಗೂ ಸರಿಯಾದ ರೀತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿಲ್ಲ. ಈ ಬಗ್ಗೆ ಶಾಸಕರು ಮುತುವರ್ಜಿ ತೋರಿಸುತ್ತಿಲ್ಲ. ನಮೂನೆ 50/53 ರಂತೆ ಅರ್ಜಿ ಸಲ್ಲಿಸಿರುವ ಎಲ್ಲಾ ಭೂಹೀನ ಬಗರ್ ಹುಕುಂ ಸಾಗುವಳಿದಾರರಿಗೆ ಕಾಲಮಿತಿ ಇಲ್ಲದೇ ಸಾಗುವಳಿ ಚೀಟಿಯನ್ನು ನೀಡಬೇಕು. ನಿವೇಶನ ರಹಿತರಿಗೆ ವಸತಿ ಸೌಕರ್ಯ ನೀಡಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ನಂಜಪ್ಪ, ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಸ್ಪಯಾ ಅನ್ವರಿ, ಕಾರ್ಯದರ್ಶಿ ಶಶಿಕಲಾ, ಗೌರಮ್ಮ, ನಾರಾಯಣಮ್ಮ, ಮಂಜುಳಮ್ಮ ದೊಡ್ಡ ತಿರುಮಲಯ್ಯ, ಹುಜಗೂರು ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -