ತಾಯಂದಿರು ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಲು ವಿಶೇಷ ಕಾಳಜಿ ವಹಿಸಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಅನಿತಾ ತಿಳಿಸಿದರು.
ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಶಿಶುಗಳಿಗೆ ಪೂರಕ ಹಾಲು, ಫೀಡಿಂಗ್ ಬಾಟಲ್ ಗಳು ಮತ್ತು ಶಿಶು ಆಹಾರ ಕುರಿತಂತೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ನೀಡಬೇಕು. ಪಾಲಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೌಷ್ಟಿಕ ಆಹಾರ, ಆರೋಗ್ಯದ ಕಾಳಜಿ ಹಾಗೂ ಶಿಕ್ಷಣದ ಕುರಿತು ಕಾಳಜಿ ವಹಿಸಬೇಕು. ಒಂದು ವರ್ಷದವರೆಗೆ ಮಕ್ಕಳಿಗೆ ಗೋಧಿ, ಓಟ್ಸ್, ಬಾರ್ಲಿ ಮೊದಲಾದ ಧಾನ್ಯದ ಆಹಾರ ಕೊಡಬೇಡಿ. ಇದರಲ್ಲಿ ಗ್ಲುಟೆನ್ ಎಂಬ ವಸ್ತುವಿದ್ದು, ಇದು ಸಿಲಿಯಾಕ್ ರೋಗಕ್ಕೆ ಕಾರಣವಾಗಬಹುದು. ಮಗುವಿನ ಮೂತ್ರಪಿಂಡ ಪೂರ್ಣ ಪ್ರಮಾಣದಲ್ಲಿ ಬೆಳೆಯದಿರುವ ಕಾರಣ ಉಪ್ಪಿನಂಶ ಜಾಸ್ತಿ ಇರುವ ಆಹಾರ ನೀಡಬಾರದು. ಸಕ್ಕರೆ ಅಂಶ ಅಧಿಕವಾಗಿರುವ ಆಹಾರ ಮತ್ತು ಪಾನೀಯ ಪದಾರ್ಥಗಳು ಸಲ್ಲ. ಇದರಿಂದ ಹಲ್ಲುಗಳಿಗೆ ಹಾನಿಯಾಗುತ್ತದೆ. ಕಡಲೆ ಬೀಜದಂತಹ ಗಟ್ಟಿ ಪದಾರ್ಥ ಕೊಡಬೇಡಿ. ಇವುಗಳಿಂದ ಉಸಿರುಗಟ್ಟುವ ಸಾಧ್ಯತೆ ಇರುತ್ತದೆ. ಜೇನುತುಪ್ಪದಲ್ಲಿ ಮಾರಕ ಬ್ಯಾಕ್ಟೀರಿಯಾ ಇರುವುದರಿಂದ ಇದರ ಉಪಯೋಗ ಒಳ್ಳೆಯದಲ್ಲ. ಸರಿಯಾಗಿ ಬೇಯಿಸಿದ ಮೊಟ್ಟೆಯನ್ನು ಕೊಡಬಹುದು ಎಮದು ವಿವರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ವಕೀಲರಾದ ಸುಬ್ರಮಣಿ, ಬೈರಾರೆಡ್ಡಿ, ಸೌಮ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -