ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ೨2 ಗ್ರಾಮ ಪಂಚಾಯತಿಗಳ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು, ಮತಗಟ್ಟೆಯ ಅಧಿಕಾರಿಗಳು ತೆಗೆದುಕೊಳ್ಳಬೇಕಾದಂತಹ ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.
ಈ ಚುನಾವಣೆಯಲ್ಲಿ ಬ್ಯಾಲೆಟ್ ಮುಖಾಂತರ ಮತದಾರರು ಮತಗಳನ್ನು ಚಲಾವಣೆ ಮಾಡುವುದರಿಂದ ಮತದಾನ ಕೇಂದ್ರದಲ್ಲಿ ಮತಪೆಟ್ಟಿಗೆಯನ್ನು ಬಳಕೆ ಮಾಡುವ ವಿಧಾನ, ಮತಪತ್ರಗಳ ನಿರ್ವಹಣೆ ಕೈಬೆರಳುಗಳಿಗೆ ಶಾಯಿ ಹಾಕುವುದು, ಮತದಾರರ ಪಟ್ಟಿಗಳ ಪರಿಶೀಲನೆ ಸೇರಿದಂತೆ ಅಧಿಕಾರಿಗಳಿಗೆ ತರಬೇತಿ ನೀಡಿ, ಮತಗಟ್ಟೆಯ ಅಧಿಕಾರಿಗಳಿಗಿರುವ ಅನುಮಾನಗಳನ್ನು ಪರಿಹರಿಸಲಾಯಿತು.
ಕೆಲವು ಮಂದಿ ಮಹಿಳಾ ಶಿಕ್ಷಕರನ್ನು ಆಯಾ ತಾಲ್ಲೂಕುಗಳಲ್ಲೆ ನೇಮಕ ಮಾಡಬೇಕೆನ್ನುವ ನಿಯಮವಿದ್ದರೂ ಕೂಡಾ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲ್ಲೂಕುಗಳಿಂದ ಶಿಡ್ಲಘಟ್ಟ ತಾಲ್ಲೂಕಿಗೆ ನೇಮಕ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವುದಾಗಿ ಅಪರ ಜಿಲ್ಲಾಧಿಕಾರಿ ನವೀನ್ಕುಮಾರ್ಬಾಬು ಈ ಸಂದರ್ಭದಲ್ಲಿ ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ‘ತಾಲ್ಲೂಕಿನಲ್ಲಿ ಚುನಾವಣೆ ನಡೆಯಬೇಕಿದ್ದ 24 ಗ್ರಾಮ ಪಂಚಾಐತಿಗಳ ಪೈಕಿ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಗಳು ಶಾಶ್ವತ ನೀರಾವರಿಗೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿರುವುದರಿಂದ 22 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಯಲಿದೆ. ಆರು ಪಂಚಾಯತಿಗಳಲ್ಲಿ 18 ಜನ ಅವಿರೋಧವಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. 770 ಅಭ್ಯರ್ಥಿಗಳು 324 ಸ್ಥಾನಗಳಿಗೆ ಸ್ಪರ್ಧೆಯಲ್ಲಿದ್ದಾರೆ. 160 ಮತಗಟ್ಟೆ ಕೇಂದ್ರಗಳಿದ್ದು, ಅವುಗಳಲ್ಲಿ 67 ಸೂಕ್ಷ್ಮ ಮತ್ತು 38 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ’ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ, ಕಂದಾಯ, ಇಲಾಖೆ, ಸೇರಿದಂತೆ ವಿವಿಧ ಇಲಾಖೆಯಗಳ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಎಇಇ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮ ಲೆಕ್ಕಾಧಿಕಾರಿಗಳಾದ ಲಾರೆನ್ಸ್, ಅಕ್ಷತಾ, ಚಂದ್ರಮ್ಮ, ಅಧಿಕಾರಿಗಳಾದ ಅನಿಲ್ಕುಮಾರ್, ರೇಷ್ಮೆ ಇಲಾಖೆಯ ಎಸ್.ಇ.ಓ.ನಾರಾಯಣಸ್ವಾಮಿ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -