ತಾಲ್ಲೂಕಿನ ಮೇಲೂರು ಮತ್ತು ಚೌಡಸಂದ್ರ ಗ್ರಾಮಗಳ ನಡುವೆ ರಸ್ತೆ ಬದಿಯಲ್ಲಿ ಬೆಳೆದಿದ್ದ ಮರಗಳನ್ನು ಅರಣ್ಯ ಇಲಾಖೆ ಮತ್ತು ಬೆಸ್ಕಾಂ ಗುತ್ತಿಗೆದಾರರು ಕಡಿದು ಪರಿಸರ ನಾಶ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೋಮವಾರ ಚಿಕ್ಕಬಳ್ಳಾಪುರ ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಿಬ್ಬಂದಿ ಕಡಿದುಹಾಕಿದ್ದು ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಮರ ಕಡಿಯುವುದನ್ನು ನಿಲ್ಲಿಸಿದ್ದಾರೆ.
ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಮೇಲೂರು ಮತ್ತು ಚೌಡಸಂದ್ರ ಗ್ರಾಮಗಳ ನಡುವೆ ರಸ್ತೆ ಬದಿಯಲ್ಲಿ ಸಾಲಾಗಿ ಮರಗಳಿದ್ದು, ಬೇಸಿಗೆಯಲ್ಲೂ ಇಲ್ಲಿ ತಂಪಾದ ವಾತಾವರಣವಿರುತ್ತದೆ. ಆದರೆ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ತಂತಿಗಳಿಗೆ ಅಡಚಣೆಯಾಗುತ್ತದೆಂದು, ಅಡ್ಡ ಇರುವ ಮರಗಳ ರೆಂಬೆಗಳನ್ನು ತೆಗೆಯಲು ಅರಣ್ಯ ಇಲಾಖೆಯವರು 2,500 ರೂಗಳಿಗೆ ಹರಾಜನ್ನು ನಡೆಸಿದ್ದಾರೆ. ಆದರೆ ಅಡ್ಡ ಇರುವ ಮರಗಳ ರೆಂಬೆಗಳನ್ನು ತೆಗೆಯದೆ ಇಡೀ ಮರವನ್ನೇ ಕಡಿಯಲಾಗುತ್ತಿದೆ. ಈಗಾಗಲೇ ಸುಮಾರು 10 ಮರಗಳನ್ನು ಕಡಿದಿದ್ದಾರೆ. ಮರಗಿಡ ರಕ್ಷಣೆ ಮಾಡಬೇಕಾದವರೇ ಮರ ಕಡಿಯಲು ಪ್ರೋತ್ಸಾಹಿಸಿದರೆ ಪರಿಸರ ಹೇಗೆ ತಾನೆ ಉಳಿಯುತ್ತದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಆರ್.ಎ.ಉಮೇಶ್ ತಿಳಿಸಿದರು.
ಈ ಬಗ್ಗೆ ನಾವು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಹೊಸ ವಿದ್ಯುತ್ ಲೈನ್ ಅಳವಡಿಸಲು ಬೆಸ್ಕಾಂ ಇಲಾಖೆಯವರು ಅನುಮತಿ ಕೋರಿದ್ದು ಮರದ ರೆಂಬೆ ಕತ್ತರಿಸಲಷ್ಟೇ ಅನುಮತಿ ನೀಡಲಾಗಿತ್ತು. ಆದರೆ ಮರಗಳನ್ನು ಸಂಪೂರ್ಣವಾಗಿ ಕಡಿದಿರುವುದು ತಿಳಿದುಬಂದಿದೆ ಕೂಡಲೇ ಸಂಬಂದಪಟ್ಟವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.
- Advertisement -
- Advertisement -
- Advertisement -
- Advertisement -