‘ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ಎಂದು ಹಾಡುತ್ತಾ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಮಳೆಗಾಗಿ ಪ್ರಾರ್ಥಿಸಿದರು.
ಜಿಲ್ಲೆಯ ಗ್ರಾಮೀಣರು ಮಳೆ ಬಾರದಿದ್ದಾಗ ಹಲವು ಜಾನಪದ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ‘ಮಳೆರಾಯ’ನ ಪೂಜೆ ಅಥವಾ ‘ವಾನರಾಯ ಪೂಜ’ ಎಂದು ಕರೆಯುವ ಆಚರಣೆಗಳಲ್ಲಿ ಗ್ರಾಮಸ್ಥರೆಲ್ಲಾ ಒಗ್ಗೂಡುತ್ತಾರೆ. ಪಡ್ಡೆ ಹುಡುಗರೆಲ್ಲ ಸೇರಿ ಕೆರೆ ಕಟ್ಟೆಯ ಹತ್ತಿರ ಹೋಗಿ ಜೇಡಿ ಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸುತ್ತಾರೆ. ಅದನ್ನು ಹಲಗೆ ಮೇಲಿಟ್ಟು ಒಬ್ಬ ಹುಡುಗನ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನ ಕುರಿತು ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ ಮನೆಮನೆಗಳ ಮುಂದೆ ಹೋಗುತ್ತಾರೆ. ಆಗ ಮನೆಯವರು ರಾಗಿ, ಅಕ್ಕಿ, ಬೇಳೆ, ಹಣವನ್ನು ಕಾಣಿಕೆಯಾಗಿ ಕೊಟ್ಟು ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸುರಿಯುತ್ತಾರೆ. ಪ್ರತಿ ದಿನ ಚಂದ್ರಮನ ಆಕಾರದ ರಂಗೋಲಿಯನ್ನು ಗ್ರಾಮದ ಒಂದು ಮುಖ್ಯ ಸ್ಥಳದಲ್ಲಿ ಹಾಕಿ ಮಳೆರಾಯನನ್ನು ಪೂಜಿಸಲಾಗುತ್ತದೆ. ಇದನ್ನು ಐದು ಅಥವಾ ಒಂಭತ್ತು ದಿನಗಳು ಮುಂದುವರೆಸುತ್ತಾರೆ. ಕೊನೆಯ ದಿನದಂದು ಹೀಗೆ ಊರೆಲ್ಲಾ ಸುತ್ತಿ ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮದೇ ಆದ ರೀತಿಯಲ್ಲಿ ಉತ್ಸವ, ಕಲೆ, ಕಾವ್ಯ, ಹಾಡು, ಗೇಯಗಳಿಂದ ಆಚರಣೆಗೆ ಮೆರುಗನ್ನು ತುಂಬುತ್ತಾರೆ.
ಚೌಡಸಂದ್ರ ಗ್ರಾಮದಲ್ಲಿ ಮಳೆರಾಯನ ಆಚರಣೆಯ ಕೊನೆಯ ದಿನ ಇಬ್ಬರು ಗಂಡು ಮಕ್ಕಳಿಗೆ ಯಥಾವತ್ ಗಂಡು ಹೆಣ್ಣಿನ ಮದುವೆಯ ರೀತಿಯಲ್ಲೇ ಮದುವೆಯನ್ನು ಮಾಡಿದರು. ಗ್ರಾಮದ ಮಹಿಳೆಯರು ರಾಗಿಮುದ್ದೆ, ಪಾಯಸ, ಅನ್ನ, ಸಾರನ್ನು ತಯಾರಿಸಿ ಎಲ್ಲರಿಗೂ ಆಚರಣೆಯ ಮುಕ್ತಾಯದ ಸಂದರ್ಭದಲ್ಲಿ ಬಡಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯೆ ಮಮತಾ, ಮಾಜಿ ಸದಸ್ಯ ರವಿ, ಲಕ್ಷ್ಮಮ್ಮ, ಬೈರಮ್ಮ, ಇಂದಿರಮ್ಮ, ಪ್ರಭಾವತಮ್ಮ, ರಾಮಕೃಷ್ಣಪ್ಪ, ಮಾರೇಗೌಡ, ನಾರಾಯಣಸ್ವಾಮಿ ಮತ್ತಿತರರು ಮಳೆರಾಯನ ಉತ್ಸವದಲ್ಲಿ ಭಾಗಿಯಾಗಿದ್ದರು.
ಜನಪದರ ದೈವ ಮಳೆರಾಯ: ರೈತರ ಬದುಕಿಗೆ ಜೀವಾಳವಾದ ಮಳೆಯನ್ನು ಜನಪದರು ದೈವವೆಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ ಮಳೆಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆಹೋಗುತ್ತಾರೆ. ಕೃಷಿಯನ್ನೇ ನಂಬಿರುವ ಗ್ರಾಮೀಣರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವುದುಂಟು. ಮಳೆರಾಯನ ಮೆರವಣಿಗೆ, ಕಂಬಳಿ ಬೀಸುವುದು, ಗುರ್ಚಿ ಹೊರುವುದು, ತುಂಬಿದ ಕೊಡ ಪೂಜೆ, ಕಪ್ಪೆ ಒನಕೆ ಮೆರವಣಿಗೆ, ನವಧಾನ್ಯದ ಪೂಜೆ, ಕಪ್ಪೆದ್ಯಾವರು, ಕತ್ತೆಗಳ ಮದುವೆ ಮೊದಲಾದ ಮಳೆಪೂಜಾ ಆಚರಣೆಗಳಿವೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ನಂತರ ಮಳೆ ಬಂದೇ ತೀರುತ್ತದೆಂಬ ಅಚಲವಾದ ನಂಬಿಕೆ ಗ್ರಾಮೀಣರದ್ದು. ಮಳೆರಾಯನನ್ನು ಸ್ತುತಿಸುವ ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ರೈತರು, ಮಕ್ಕಳು ಮನೆಮನೆಗೂ ಹೋಗುತ್ತಾರೆ.
ಮಳೆರಾಯನ ಮೆರವಣಿಗೆ, ಪೂಜೆ ವಿಧಾನಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಹಾಡುಗಳೂ ಅಷ್ಟೇ. ಇವು ಜಾನಪದ ‘ಪದ’ಗಳು.
‘ಮಿದ್ದಿಮಿಂದ ಮಿರಪಸೆಟ್ಟು
ವಾನಲ್ಯಾಕ ಎಂಡಿಪೋಯ
ಮಾ ಮಾಮಗಾರಿ ಕೂತುಳ್ಳು
ಮಗುಳ್ಯಾಕ ಪಾರಿಪೋಯ್ರಿ
ಇಂಕಾನ ರಾರಾದ ವಾನದೇವುಡ’ ಎಂಬ ತೆಲುಗು ಭಾಷೆಯ ಮಳೆರಾಯನ ಪದಗಳು ಕೂಡ ಈ ಸಂದರ್ಭದಲ್ಲಿ ಹೇಳುತ್ತಾರೆ’ ಎಂದು ಚೌಡಸಂದ್ರ ಗ್ರಾಮದ ಸಿ.ಪಿ.ಈ. ಕರಗಪ್ಪ ವಿವರಿಸಿದರು.
- Advertisement -
- Advertisement -
- Advertisement -
- Advertisement -