‘ಪ್ಲಾಸ್ಟಿಕ್ ಬಳಸುವುದಿಲ್ಲ. ನಮ್ಮ ಶಾಲೆಯಲ್ಲಿ ಮತ್ತು ಗ್ರಾಮ ಪಂಚಾಯತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸುತ್ತೇವೆ’ ಎಂದು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟವರು ರಾಜ್ಯ ಸರ್ಕಾರದ ಲೋಕ ಅದಾಲತ್ನ ಸದಸ್ಯ ಹಾಗೂ ಪರಿಸರವಾದಿ ಡಾ. ಆ.ನ ಯಲ್ಲಪ್ಪರೆಡ್ಡಿ.
ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ‘ಮಕ್ಕಳ ಗ್ರಾಮ ಸಭೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಕ್ಕಳಿಗೆ ತಿಳುವಳಿಕೆ ನೀಡುವುದರ ಮೂಲಕ ಹಿರಿಯರಿಗೂ ಸಂದೇಶವನ್ನು ರವಾನಿಸಿದರು.
ಮಕ್ಕಳು ಹಾಗೂ ಸಸಿ ಎರಡೂ ಒಂದೆ. ಇಂದು ನಾವು ಬೆಳೆಸಿದ ಸಸಿ ಒಂದಲ್ಲ ಒಂದು ದಿನ ನೆರಳು, ಫಲ ಕೊಟ್ಟೆ ಕೊಡುತ್ತದೆ. ಹಾಗೆಯೆ ನಾವು ಉತ್ತಮವಾಗಿ ಬೆಳೆಸಿದ ಒಬ್ಬ ವಿದ್ಯಾರ್ಥಿ ಇಂದಲ್ಲ ನಾಳೆ ಈ ಸಮಾಜಕ್ಕೆ ಉತ್ತಮ ಕೊಡುಗೆಯಾಗಬಲ್ಲ ಎಂದು ಈ ಸಂದರ್ಭದಲ್ಲಿ ಡಾ. ಆ.ನ ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.
ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪ್ರೌಢಶಾಲೆಯ ವಿದ್ಯಾರ್ಥಿಗಳು, ಮಳ್ಳೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು, ಮೇಲೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ‘ಮಕ್ಕಳ ಗ್ರಾಮ ಸಭೆ’ಯಲ್ಲಿ ವಿದ್ಯಾರ್ಥಿಗಳು ತಮ್ಮ ಗ್ರಾಮ, ಶಾಲೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಬಿ.ಕಾವೇರಿ ಅವರ ಮುಂದಿಟ್ಟು ಪರಿಹಾರವನ್ನು ಪಡೆದರು.
ಮತ್ತೂರಿನ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಶೌಚಾಲಯ ಬೇಕೆಂದಾಗ ತಕ್ಷಣ ಅದಕ್ಕಾಗಿ 35 ಸಾವಿರ ರೂಗಳನ್ನು ಮಂಜೂರು ಮಾಡುವುದಾಗಿ ಸಿಇಒ ಘೋಷಿಸಿದರು. ಮುತ್ತೂರು ಹಾಗೂ ಮಳ್ಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ ಎಂದಾಗ ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್ ಕೊಳವೆ ಬಾವಿಗಳು ಕೊರೆಸಿದರೂ ನೀರು ಸಿಗುತ್ತಿಲ್ಲವೆಂದು ಹತಾಶರಾಗಿ ನುಡಿದರು. ಆಗ ಡಾ. ಆ.ನ ಯಲ್ಲಪ್ಪರೆಡ್ಡಿ ಮಳೆನೀರು ಕೊಯ್ಲಿನ ಯೋಜನೆ ರೂಪಿಸೋಣ ಎಂದು ಆಶಾಭಾವವನ್ನು ತುಂಬಿದರು.
ಅಂಗನವಾಡಿ ಕಟ್ಟಡಗಳ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ನೈರ್ಮಲ್ಯದ ಕುರಿತಂತೆ ಮಕ್ಕಳು ಕೇಳುತ್ತಿದ್ದಂತೆಯೇ ತಕ್ಷಣ ಆಯಾ ಅಧಿಕಾರಿಗಳಿಗೆ ಆ ಬಗ್ಗೆ ಕ್ರಮ ಕೈಗೊಳ್ಳಲು ಸಿಇಒ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ.ಕಾವೇರಿ, ‘ವಿದ್ಯಾರ್ಥಿಗಳಲ್ಲಿ ನಮ್ಮ ಸುತ್ತ ಮುತ್ತ ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ, ಸಾಮಾಜಿಕ ಇನ್ನಿತರೆ ಕ್ಷೇತ್ರಗಳಲ್ಲಿ ಏನು ಅಭಿವೃದ್ದಿಯಾಗುತ್ತಿದೆ, ಇಲ್ಲ ಎನ್ನುವ ವಿಚಾರಗಳು ಗಮನಕ್ಕೆ ಬರುತ್ತವೆಯಲ್ಲದೆ ಅವು ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುತ್ತವೆ. ಎಲ್ಲಾ ಮನೆಗಳಲ್ಲೂ ಶೌಚಾಲಯವಿರುವು ಕಡ್ಡಾಯ. ನೈರ್ಮಲ್ಯದಿಂದ ಆರೋಗ್ಯ ವೃದ್ಧಿಸುತ್ತದೆ. ಆಸ್ಪತ್ರೆಗೆ ಖರ್ಚು ಮಾಡುವ ಹಣದಲ್ಲಿ ಶೌಚಾಲಯ ನಿರ್ಮಿಸಬಹುದು’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕಿ ಸುರೇಖಾ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ, ಕಾರ್ಮಿಕ ಅಧಿಕಾರಿ ರಾಮಪ್ಪ, ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್, ಮಳ್ಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ, ನಮ್ಮ ಮುತ್ತೂರು ಸಂಸ್ಥೆಯ ಕಾರ್ಯದರ್ಶಿ ಉಷಾಶೆಟ್ಟಿ, ಸಿಎಂಸಿ ಕಾರ್ಯಕರ್ತ ಸುನಿಲ್ಕುಮಾರ್, ನೇತಾಜಿ ರೂರಲ್ ಡೆವಲೆಪ್ಮೆಂಟ್ ಸೊಸೈಟಿಯ ಅಧ್ಯಕ್ಷ ಜಿ.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -