27.1 C
Sidlaghatta
Monday, July 14, 2025

ಮಹಿಳಾಪರ ಕಾನೂನು ತಿಳುವಳಿಕೆ ನೀಡುವ ಕೆಲಸ ಆಗಬೇಕಿದೆ

- Advertisement -
- Advertisement -

ನಮ್ಮಲ್ಲಿ ಮಹಿಳೆಯರಿಗಾಗಿ ವಿವಿಧ ಯೋಜನೆಗಳಿವೆ, ಅವಕಾಶಗಳಿವೆ, ಮಹಿಳಾಪರ ಕಾನೂನುಗಳೂ ಇವೆ. ಆದರೆ ಇದನ್ನು ತಳಮಟ್ಟಕ್ಕೆ ತಲುಪಿಸುವಂತಹ ಮಾಹಿತಿ, ತಿಳುವಳಿಕೆ ನೀಡುವ ಕೆಲಸ ಆಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಬಿ.ವಿ.ಮುನೇಗೌಡ ಕಟ್ಟಡದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ “ನಿರ್ಗತಿಕ ಮಹಿಳೆಯರಿಗೆ, ವಿಧವೆಯರಿಗೆ ಹಾಗೂ ಅಬಲೆಯರ ಹಕ್ಕುಗಳ ಬಗ್ಗೆ” ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಅಂಟಿರುವ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ವರದಕ್ಷಿಣೆ, ದೇವದಾಸಿ ಪದ್ಧತಿಗಳು ನಾಶವಾಗಬೇಕಾದರೆ ಶೋಷಿತರು, ಬಡವರು, ನಿರ್ಗತಿಕ, ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಹೆಚ್ಚಾಗಿ ಕಾನೂನಿನ ತಿಳಿವಳಿಕೆ ಮೂಡಿಸುವ ಅವಶ್ಯ ಇದೆ. ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದ್ಭಳಿಕೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಮಹಿಳಾ ದೌರ್ಜನ್ಯದಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ಅರಿವನ್ನು ಪಡೆದು ಸಹಬಾಳ್ವೆ ನಡೆಸಬೇಕು ಎಂದರು.
ಸಾಂತ್ವನ ಕೇಂದ್ರದ ಡಾ.ವಿಜಯ ವೆಂಕಟರಾಮ್ ಮಾತನಾಡಿ, ಇಂದು ಮಹಿಳೆಯರು ಪಡೆದಿರುವ ಹಕ್ಕುಗಳು ಮತ್ತು ಆರ್ಥಿಕ ಸ್ವಾವಲಂಬನೆಯ ಹಿಂದೆ ಒಂದು ದೀರ್ಘವಾದ ಹೋರಾಟದ ಇತಿಹಾಸವೇ ಇದೆ. ಸಮಾಜದಲ್ಲಿ ಎರಡನೆಯ ಪ್ರಜೆಯನ್ನಾಗಿಯೇ ಗುರುತಿಸಲಾಗಿದ್ದ ಮಹಿಳೆಗೆ ಪುರುಷರೊಡನೆ ಸಮಾನ ಸ್ಥಾನಮಾನವನ್ನು ಮತ್ತು ಸಮಾನ ಹಕ್ಕುಗಳನ್ನು ನೀಡಿದ್ದು ಭಾರತದ ಸಂವಿಧಾನ. ಶೋಷಣೆಯ ವಿರುದ್ಧ ವ್ಯಕ್ತಿಗೆ ರಕ್ಷಣೆಯಿಲ್ಲದಿದ್ದರೆ ಸಂವಿಧಾನ ಕೊಡಮಾಡಿರುವ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ.
ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು, ಅದರಲ್ಲೂ ಮಹಿಳೆಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅನೈತಿಕ ವ್ಯವಹಾರಗಳಿಗೆ ಬಳಸಿಕೊಳ್ಳುವುದಕ್ಕಾಗಿ ಅಪಹರಿಸುವುದನ್ನು, ಮಾರಾಟಮಾಡುವುದನ್ನು ಹಾಗೂ ಕಳ್ಳತನದಿಂದ ಅವರನ್ನು ಸಾಗಿಸುವುದನ್ನು ತಡೆಯುವುದಕ್ಕಾಗಿ ಅನೈತಿಕ ವ್ಯವಹಾರಗಳಿಗಾಗಿ ಕಳ್ಳಸಾಗಾಣಿಕೆ(ತಡೆಗಟ್ಟುವಿಕೆ) ಅಧಿನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಅಲ್ಲದೆ, ಅದಕ್ಕೆ ಕಾರಣಗಳು, ಇಂಥ ಶೋಷಣೆಗೆ ಸುಲಭವಾಗಿ ಗುರಿಯಾಗುವವರು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವವರನ್ನು ರಕ್ಷಿಸುವುದು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವುದು ಮುಂತಾದ ಎಲ್ಲ ವಿಷಯಗಳನ್ನೊಳಗೊಂಡ ಒಂದು ಸಮಗ್ರ ಕ್ರಿಯಾ ಯೋಜನೆಯನ್ನು ಸಹ ಸರ್ಕಾರ ರೂಪಿಸಿದೆ ಎಂದು ವಿವರಿಸಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಸರ್ಕಾರಿ ವಕೀಲೆ ಎಸ್.ಕುಮುದಿನಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!