ಗ್ರಾಮೀಣ ಬಡಜನರ ಅಭಿವೃದ್ಧಿ ಹಾಗೂ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸ್ವಸಹಾಯ ಸಂಘಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಭಾನುವಾರ ನಡೆಸಿದ ತಾಲ್ಲೂಕಿನ ಗ್ರಾಮ ಸಮಾಲೋಚನಾ ಸಭೆ ಹಾಗೂ ನೂತನ ಸ್ವಸಹಾಯ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳೆಂದರೆ ಕೇವಲ ಹಣ ಪಡೆಯುವ ಉದ್ದೇಶವಲ್ಲ, ಅಥವಾ ರಾಜಕೀಯ ಪ್ರೇರಿತವಲ್ಲ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆತುಕೊಳ್ಳುವ ಮಹಿಳಾ ಸಂಘಟನೆ. ಬದುಕು ರೂಪಿಸಿಕೊಳ್ಳಲು ಅಗತ್ಯ ಶಿಕ್ಷಣ ಮತ್ತು ಸಿಗುವ ನೆರವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ಗ್ರಾಮ ನೈರ್ಮಲ್ಯದ ಬಗ್ಗೆ ಹೆಚ್ಚು ಕೆಲಸ ಮಾಡಬೇಕು ಎಂದು ಹೇಳಿದರು.
ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಸಮುದಾಯ ಕಾರ್ಯಕ್ರಮಗಳು ಕೇವಲ ಒಬ್ಬರಿಂದಾಗುವ ಕೆಲಸವಲ್ಲ. ಎಲ್ಲರೂ ಸಂಘಟಿತರಾಗಿ ನಮ್ಮ ಊರು, ನಮ್ಮ ಗ್ರಾಮ ಎಂಬ ಮನೋಭಾವದಿಂದ ಕೆಲಸ ಮಾಡಬೇಕು. ಸೋಲಾರ್, ಗೋಬರ್ ಗ್ಯಾಸ್, ಶೌಚಾಲಯ ಮುಂತಾದ ಗ್ರಾಮ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡು ಮಾದರಿಯಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಸ್ವಸಹಾಯ ಸಂಘಗಳ ಉದ್ದೇಶ ಹಾಗೂ ಯೋಜನೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ನೂತನ ಸಂಘಗಳಿಗೆ ಚಟುವಟಿಕೆಗಳ ದಾಖಲಾತಿ ಪುಸ್ತಕಗಳನ್ನು ವಿತರಿಸಲಾಯಿತು. ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ತಾಲ್ಲೂಕು ಮಾಜಿ ಪುರಸಭಾ ಸದಸ್ಯ ಕೆಂಪರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -