ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ “ಮಾತೃಪೂರ್ಣ” ಯೋಜನೆ ಯಶಸ್ಸಿಗೆ ಅಧಿಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕಿಯರು ಪ್ರಾಮಾಣಿಕತೆ, ಬದ್ಧತೆ ಮತ್ತು ಕಾಳಜಿಯಿಂದ ಶ್ರಮಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವತಿಯಿಂದ ಆಯೋಜಿಸಿದ್ದ ಮಾತೃಪೂರ್ಣ ಯೋಜನೆ ಮತ್ತು ಸೀಮಂತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಪೌಷ್ಠಿಕತೆಯಿಂದ ಆಗುತ್ತಿರುವ ಶಿಶುಗಳ ಮರಣ ಪ್ರಮಾಣ ತಡೆಗಟ್ಟಲು ಹಾಗೂ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ನೀಡುವ ಮೂಲಕ ಅವರ ಆರೋಗ್ಯವನ್ನು ಸುಧಾರಿಸುವುದಲ್ಲದೆ ಕಡಿಮೆ ತೂಕದ ಶಿಶುಗಳ ಜನನವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈ ಮಹತ್ವಪೂರ್ಣ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.
ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಅವರಿಗೆ ಅಗತ್ಯವಿರುವ ಸಮತೋಲಿತ ಹಾಗೂ ಪೌಷ್ಠಿಕ ಆಹಾರ ಪೂರೈಸುವ ವೈಶಿಷ್ಟ್ಯಪೂರ್ಣವಾದ ಈ ಯೋಜನೆಯಾಗಿದ್ದು, ಇದಕ್ಕೆ ನೇಮಕಗೊಂಡಿರುವ ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಮಾತ್ರವೇ ಉತ್ತಮ ಯೋಜನೆಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ಮಾತನಾಡಿ, ಕಡು ಬಡುವರು, ರೈತಾಪಿ ವರ್ಗದವರು ಮತ್ತು ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅಪೌಷ್ಠಿಕತೆಯನ್ನು ನಿಯಂತ್ರಣ ಮಾಡಲು ಮತ್ತು ನಿರ್ಮೂಲನೆ ಮಾಡುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ. ಮೇಲ್ವಿಚಾರಕಿಯರು ಗರ್ಭಿಣಿಯರು ಮತ್ತು ಬಾಣಂತಿಯರನ್ನು ಭೇಟಿಯಾಗಿ ಈ ಯೋಜನೆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು. ಯೋಜನೆಯ ಸಂಪೂರ್ಣ ಫಲವನ್ನು ಅವರು ಪಡೆಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರಾಧಮ್ಮ ಮಾತನಾಡಿ, ತಾಯಿ ಮತ್ತು ಶಿಶುಮರಣಕ್ಕೆ ರಕ್ತಹೀನತೆ ಕಾರಣ. ಅದನ್ನು ತಪ್ಪಿಸಲು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಹಾಗೂ ಬಿಸಿಯೂಟ ನೀಡುವ ಈ ಯೋಜನೆ ಯನ್ನು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಅದು ಎಲ್ಲಾ ಕಡೆ ಜಾರಿಗೆ ಬಂದಿದೆ.
ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೌಷ್ಟಿಕ ಆಹಾರವನ್ನು ನೀಡುವುದರ ಮೂಲಕ ರಕ್ತ ಹೀನತೆಯನ್ನು ತಡಗಟ್ಟುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿ, ಬೇಳೆ ಹಾಗೂ ಬಿಸಿಯೂಟವನ್ನು ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತದೆ ಎಂದರು.
ಮುಖ್ಯಶಿಕ್ಷಕಿ ವೆಂಕಟರತ್ನಮ್ಮ ಮಾತನಾಡಿ, ಯೋಜನೆಯಡಿ ಸಿಗುವಂತಹ ಸೌಲಭ್ಯವನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಬೇಕು. ಅಸಡ್ಡೆ ಮನೋಭಾವನೆ ತೋರಬಾರದು. ಈ ಯೋಜನೆಯ ಜವಾಬ್ದಾರಿ ಹೊತ್ತಿರುವವರು ಸೂಕ್ತವಾಗಿ ಮಾರ್ಗದರ್ಶನ ನೀಡುವ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದರು.
ಮಹಿಳಾ ಸಂಘಗಳಿಂದ ಜಿಲ್ಲಾ ಪ್ರಶಸ್ತಿ ಪಡೆದಿರುವ ಶಿಕ್ಷಕಿ ವೆಂಕಟರತ್ನಮ್ಮ ಅವರನ್ನು ಸನ್ಮಾನಿಸಿದರು. ಪರಿಶಿಷ್ಟ ಪಂಗಡದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಿಟ್ ನೀಡಲಾಯಿತು.
ಅಂಗನವಾಡಿ ಕಾರ್ಯಕರ್ತೆ ಮಂಜುಳಮ್ಮ, ನಳಿನಮ್ಮ, ಲಲಿತಮ್ಮ, ನಾರಾಯಣಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪ ರಾಮಚಂದ್ರಪ್ಪ, ವೇಣುಗೋಪಾಲ್, ನರಸಿಂಹಮೂರ್ತಿ, ಶ್ರೀರಾಮ್, ಪಾರ್ವತಮ್ಮ, ಭವ್ಯ, ಮುನಿರತ್ನಮ್ಮ, ಸಹಶಿಕ್ಷಕರಾದ ಚಾಂದ್ ಪಾಷ, ಭಾರತಿ, ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -