ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಬಿಸಿಯೂಟಕ್ಕಾಗಿ ಅಕ್ಕಿಯ ಜೊತೆಗೆ ಬೇಳೆ ಕಾಳನ್ನು ನೀಡುತ್ತಿದೆ. ಮಕ್ಕಳಿಗೆ ಎಲ್ಲಾ ದಿನವೂ ಕೇವಲ ಬೇಳೆ ಸಾರು ಮಾಡಲಾಗುವುದಿಲ್ಲವಲ್ಲ. ಜೊತೆಗೆ ಸಾಂಬಾರಿನಲ್ಲಿ ಪೌಷ್ಟಿಕಾಂಶ ಬೇಕು. ಅದಕ್ಕಾಗಿ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ತರವನ್ನು ಕಂಡುಕೊಂಡಿದ್ದಾರೆ.
ಬಗೆ ಬಗೆಯ ತರಕಾರಿಗಳನ್ನು ಶಾಲಾ ಆವರಣದಲ್ಲಿ ಬೆಳೆಸಿ ಅದನ್ನು ಮಕ್ಕಳಿಗಾಗಿ ಬಳಸುವ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರರಿಗೆ ಮಾದರಿಯಾಗಿದ್ದಾರೆ. ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದ್ದು, ಸರ್ಕಾರದ ಅನುದಾನ ಮತ್ತು ಗ್ರಾಮ-ಸ್ಥರ ನೆರವಿನಿಂದ ಕಾಂಪೌಂಡ್ ನಿರ್ಮಿಸಲಾಗಿದೆ. ‘ವಿಷನ್ ಗ್ರೀನ್’ ಎಂಬ ಸಂಘ ರಚಿಸಿಕೊಂಡು, ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶ ಹೊಂದಿರುವ ಒಂದು ತಂಡ ಶಾಲೆಯೊಂದಿಗೆ ಸೇರಿ ಕಳೆದ ವರ್ಷ ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ, ಮಹಾಗನಿ, ಬಸವನ ಪಾದ, ಮಾವು, ಗಸಗಸೆ, ಅರಳಿ, ಕಾಡು ಬಾದಾಮಿ, ಅತ್ತಿ, ನುಗ್ಗೆ ಮುಂತಾದ ನೂರು ಗಿಡಗಳನ್ನು ನೆಟ್ಟು ಹನಿ ನೀರಾವರಿ ಪೈಪ್ಗಳನ್ನು ಅಳವಡಿಸಿದ್ದರು.
ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಲು ಮುಂದಾದರು. ತೊಗರಿಕಾಯಿ, ಅಲಸಂದಿ, ಕುಂಬಳಕಾಯಿ, ಬಸಲೆಸೊಪ್ಪು, ಅರಿವೆಸೊಪ್ಪು, ನುಗ್ಗೆಕಾಯಿ, ಕರಿಬೇವು, ಅಮೃತಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಗೊಂಗೂರ ಸೊಪ್ಪು, ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಮುಂತಾದವುಗಳನ್ನು ಬೆಳೆಯುತ್ತಾ ಬಿಸಿಯೂಟದ ರುಚಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬೇಳೆ ಸಾರು ಮಾತ್ರವಿದ್ದರೆ, ವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬೇಳೆ ಕಾಳಿನ ಜೊತೆಗೆ ಬಸಳೆ, ಹರಿವೆ, ನುಗ್ಗೆಕಾಯಿ, ಬೆಂಡೆಕಾಯಿ, ವಿವಿಧ ಸೊಪ್ಪುಗಳು ಹೀಗೆ ವಿಧವಿಧ ತರಕಾರಿಗಳ ಸಾಂಬಾರು ಸಿಗುತ್ತದೆ.
‘ತೋಟವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಆ ಮೂಲಕ ಮಕ್ಕಳಿಗೆ ಸ್ವಾವಲಂಬನೆ, ಕೃಷಿ, ಪರಿಸರದ ಪಾಠ. ಶಾಲೆಗೆ ಬೇಕಾದಷ್ಟು ತರಕಾರಿಯನ್ನು ಈ ತೋಟದಲ್ಲಿ ಬೆಳೆಸಲಾಗುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಬಳಸುತ್ತಿಲ್ಲ. ತರಗೆಲೆ ಸೊಪ್ಪುಗಳು, ಸೆಗಣಿ ಹಾಗೂ ತೊಳೆದ ನೀರು ಗೊಬ್ಬರವಾಗಿ ಬಳಕೆಯಾಗುತ್ತದೆ. ಕೋತಿಗಳ ಕಾಟವಿದ್ದರೂ ವಿದ್ಯಾರ್ಥಿಗಳ ಉತ್ಸಹಕ್ಕೆ ಕಮ್ಮಿಯಿಲ್ಲ’ ಎನ್ನುತ್ತಾರೆ ಶಿಕ್ಷಕ ರಾಮಕೃಷ್ಣ.
- Advertisement -
- Advertisement -
- Advertisement -
- Advertisement -