ಮಾನಸಿಕ ದೌರ್ಭಲ್ಯಗಳನ್ನು ಮೀರಿ ಬೆಳೆದಾಗ ಆತ್ಮಶಾಂತಿಯ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವೂ ಉಳಿಯುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ರಾಗ, ದ್ವೇಷ, ಅಹಂಕಾರ ಮುಂತಾದ ಕ್ಷುಲ್ಲಕ ಕಾರಣಗಳಿಂದಾಗಿಯೇ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದಾಗಿ ಅವರ ಆರೋಗ್ಯ, ಹಣ, ಸಮಯ ವ್ಯರ್ಥವಾಗುತ್ತದೆ. ಮಾನಸಿಕ ಪ್ರಜ್ಞೆಯನ್ನು ಆತ್ಮಾವಲೋಕನಾ ಕ್ರಿಯೆಯೊಂದಿಗೆ, ಹೃದಯ ವೈಶಾಲ್ಯದಿಂದ ಬೆಳೆಸಿಕೊಳ್ಳುವ ಅತ್ಯಗತ್ಯವಿದೆ. ಮಾನಸಿಕ ಅಸ್ವಸ್ಥತೆಗೆ ಈಗ ವೈದ್ಯಕೀಯ ಚಿಕಿತ್ಸೆಗಳು ಸುಧಾರಣಾ ಕ್ರಮಗಳು ಇರುವುದನ್ನು ಮನಗಾಣಬೇಕು. ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆಯ ವತಿಯಿಂದ ಬೆಳ್ಳೂಟಿ ಗೇಟ್ ಬಳಿ ಉಚಿತ ಆಸ್ಪತ್ರೆ ಮತ್ತು ಪುನರ್ವಸತಿ ಪಾಲನಾ ಕೇಂದ್ರವನ್ನು ನೂತನವಾಗಿ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಇದುವರೆಗೂ ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುತ್ತಿದ್ದೆವು. ಇನ್ನು ಮುಂದೆ ನೂತನ ಕಟ್ಟಡದಲ್ಲಿ ಅವರಿಗೆ ವೃತ್ತಿಪರ ಶಿಕ್ಷಣ ತರಬೇತಿಗಳಾದ ಕೆಮಿಕಲ್ಸ್ ತಯಾರಿಕೆ, ಆಹಾರ ಪದಾರ್ಥಗಳ ತಯಾರಿಕೆ, ಹಣ್ಣಿನ ಸಂಸ್ಕರಣೆ, ಹರ್ಬಲ್ ವಸ್ತುಗಳ ತಯಾರಿಕೆ, ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆ, ಕಂಪ್ಯೂಟರ್, ಟೈಲರಿಂಗ್ ಮುಂತಾದ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಮಾನಸಿಕ ತಜ್ಞ ಡಾ.ಕಿಶೋರ್, ಡಾ.ವಿ.ವೆಂಕಟರಾಮಯ್ಯ, ಡಾ.ಮಲ್ಲಿಕಾ, ಲಕ್ಷ್ಮಣಾಚಾರ್, ಎಚ್.ವಿ.ರಾಮಕೃಷ್ಣಪ್ಪ, ಭಕ್ತರಹಳ್ಳಿ ಬೈರೇಗೌಡ, ಸೋಮಶೇಖರ್, ದೇವರಾಜ್, ಪಿ.ಗೋಪಿನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -