ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ಖಂಡಿಸಿ, ಈಗಾಗಲೇ ಕೆಲ ರೈತರ ಪಂಪ್ಸೆಟ್ಗಳಿಗೆ ಅಳವಡಿಸಿರುವ ಮೀಟರ್ಗಳನ್ನು ಕಿತ್ತು ಪ್ರತಿಭಟನಾ ಮೆರವಣಿಗೆಯನ್ನು ರೈತರು ನಡೆಸಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆಯಿತು.
ಪಟ್ಟಣದ ಉಲ್ಲೂರುಪೇಟೆಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ಬೆಸ್ಕಾಂ ಕಚೇರಿಯನ್ನು ತಲುಪಿದರು.
ಕಳೆದ ಬಾರಿ ಪ್ರತಿಭಟನೆಯನ್ನು ರೈತರು ಹಮ್ಮಿಕೊಂಡಿದ್ದಾಗ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದಿಲ್ಲವೆಂದಿದ್ದ ಅಧಿಕಾರಿಗಳು ಈಗ ಮಾತಿಗೆ ತಪ್ಪಿದ್ದಾರೆ. ಬಯಲುಸೀಮೆ ಪ್ರದೇಶದ ರೈತು ಅತೀವ ಸಂಕಷ್ಟದಲ್ಲಿದ್ದಾರೆ. ಆಳವಾದ ಕೊಳವೆ ಬಾವಿಗಳನ್ನು ಕೊರೆಸಿ ಸಾಲಗಳ ಸುಳಿಯಲ್ಲಿ ಸಿಲುಕಿ ಅತ್ಯಲ್ಪ ನೀರಿನಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಅಧಿಕಾರಿಗಳು ಕಷ್ಟಕ್ಕೆ ನಷ್ಟ ಎನ್ನುವಂತೆ ಬರೆ ಎಳೆಯುತ್ತಿದ್ದಾರೆ ಎಂದು ದೂರಿದರು.
ಪಟ್ಟಣಕ್ಕೆ ಹೊಂದಿಕೊಂಡ ರೈತರ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿದ್ದಾರೆ. ನಗರ ಪ್ರದೇಶದ ರೈತರು ಗ್ರಾಮೀಣ ರೈತರು ಎಂದು ಅಧಿಕಾರಿಗಳು ವಿಂಗಡನೆ ಮಾಡುತ್ತಾ ರೈತರಲ್ಲಿ ಒಡಕನ್ನು ಉಂಟುಮಾಡುತ್ತಿರುವುದನ್ನು ಖಂಡಿಸುತ್ತೇವೆ. ರೈತರೆಲ್ಲರೂ ಒಂದೇ, ಎಲ್ಲರದ್ದೂ ಒಂದೇ ಸಮಸ್ಯೆಯಾಗಿದೆ. ಒಂದೆಡೆ ಸರಿಯಾಗಿ ವಿದ್ಯುತ್ ಒದಗಿಸದೇ ಬೆಸ್ಕಾಂ ಇಲಾಖೆಯು ಕಣ್ಣಾಮುಚ್ಚಾಲೆ ಆಡುತ್ತಿದ್ದರೆ, ಇನ್ನೊಂದೆಡೆ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಮೂಲಕ ಶೋಷಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಾಂ ಇಲಾಖೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು 26 ಮೀಟರ್ಗಳನ್ನು ಬೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಶಿವಣ್ಣ ಮತ್ತು ಶ್ರೀಧರ್ ಅವರಿಗೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಂಜಪ್ಪ, ಅಬ್ಲುಡು ಆರ್.ದೇವರಾಜ್, ನಾರಾಯಣಸ್ವಾಮಿ, ವೇಣುಗೋಪಾಲ್, ಶ್ರೀನಿವಾಸ್, ಮಂಜುನಾಥ್, ಮಾದವಪ್ಪ, ಮೂರ್ತಿ, ರಮೇಶ್, ಸೋಮಶೇಖರ್, ಕೃಷ್ಣ, ರವಿಕುಮಾರ್, ಗೋಪಾಲಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -
Super concept about sidlaghatta