ಗ್ರಾಮಗಳಲ್ಲಿ ಯುವಕರು ಸರ್ಕಾರಿ ಶಾಲೆಗಳಿಗೆ ಬೆನ್ನೆಲುಬಾಗಿದ್ದು, ಅಗತ್ಯ ಸೌಕರ್ಯ ನೀಡುವ ಕೆಲಸವೂ ಕೂಡ ಕನ್ನಡ ಕಟ್ಟುವ ಕೆಲಸವೇ ಆಗಿದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಭಾನುವಾರ ಶ್ರೀ ಜೈ ಭುವನೇಶ್ವರಿ ಯುವಕ ಸಂಘ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸುವುದು, ಮಕ್ಕಳ ದಾಖಲಾತಿಗೆ ಸಹಕರಿಸುವುದು, ಕನ್ನಡ ಫಲಕಗಳನ್ನು ಹಾಕುವುದು, ಕನ್ನಡವನ್ನು ಶ್ರೀಮಂತಗೊಳಿಸಿದ ಸಾಧಕರ ಹೆಸರುಗಳನ್ನು ರಸ್ತೆ, ಬೀದಿ, ಓಣಿಗಳಿಗೆ ಇಡುವುದು, ಓದುವ ಹವ್ಯಾಸವನ್ನು ಬೆಳೆಸುವುದು, ಸಾಂಸ್ಕೃತಿಕ ಪರಿಸರವನ್ನು ಗ್ರಾಮಗಳಲ್ಲಿ ಮೂಡಿಸುವುದು ಎಲ್ಲವೂ ಕನ್ನಡವನ್ನು ಕಟ್ಟಿ ಬೆಳೆಸುವ ಕೆಲಸವೇ ಆಗಿದೆ. ಯಣ್ಣಂಗೂರು ಗ್ರಾಮದ ಯುವಕರು ಶಾಲಾ ವಿದ್ಯಾರ್ಥೀಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾದರಿ ಹೆಜ್ಜೆಯನ್ನಿಟ್ಟಿದ್ದಾರೆ. ಇದು ಮುಂದುವರೆಯಲಿ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ನಾಡು, ನುಡಿಯನ್ನು ಉಳಿಸುವ ನಿಟ್ಟಿನಲ್ಲಿ ಯುವಜನತೆ ಒಗ್ಗಟ್ಟಾಗಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಂತಹ ಕಾರ್ಯಗಳಾಗಬೇಕು. ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ವರ್ಷದುದ್ದಕ್ಕೂ ನಮ್ಮ ನಡವಳಿಕೆಯ ಮೂಲಕ ಕನ್ನಡತನವನ್ನು ಉಳಿಸಿಕೊಳ್ಳೋಣ ಎಂದರು.
ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಶ್ರೀ ಜೈ ಭುವನೇಶ್ವರಿ ಯುವಕ ಸಂಘದ ವತಿಯಿಂದ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣಮೂರ್ತಿ, ಈರಪ್ಪ, ಗ್ರಾಮಸ್ಥರಾದ ಚನ್ನೇಗೌಡ, ಗಣೇಶಪ್ಪ, ಶ್ರೀ ಜೈ ಭುವನೇಶ್ವರಿ ಯುವಕ ಸಂಘದ ಸದಸ್ಯರಾದ ಅಶೋಕ್, ರಘು, ಪ್ರಶಾಂತ, ಹರೀಶ್, ಗಿರೀಶ್, ರಾಘವೇಂದ್ರ, ಸುರೇಂದ್ರ, ಲೋಕೇಶ್, ಮಂಜೇಶ್, ಪ್ರದೀಪ್, ಕುಮಾರ್, ಶ್ರೀಧರ್, ಬಚ್ಚೇಗೌಡ, ಅನಿಲ್, ರವಿ, ಶಶಿ, ಆನಂದ, ನಿತಿನ್, ಪಿಳ್ಳೇಗೌಡ ಹಾಜರಿದ್ದರು.
- Advertisement -
- Advertisement -
- Advertisement -
- Advertisement -