ಮುಂಬರುವ ದಿನಗಳಲ್ಲಿ ಉತ್ತಮ ವಾತಾವರಣದ ಲಭ್ಯತೆಗಾಗಿ ಬೀಜದುಂಡೆಗಳನ್ನು ತಯಾರಿಸಿ, ಭೂದೇವಿಗೆ ಬೀಜದುಂಡೆಯನ್ನು ಅರ್ಪಿಸುವ ಅಭಿಯಾನವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ. ಮಳೆ ನೀರು ಸಂರಕ್ಷಿಸುವುದು ಮತ್ತು ಗಿಡ ಮರ ಬೆಳಸುವುದು ಎಲ್ಲರ ಜವಾಬ್ದಾರಿ ಎಂದು ಯುವ ಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯ ಕುಮಾರ್ ಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟದ ಸಾಲಿನಲ್ಲಿ ಶನಿವಾರ ಶಿಡ್ಲಘಟ್ಟ ವಲಯ ಅರಣ್ಯ ಇಲಾಖೆ, ಯುವಶಕ್ತಿ ಸಂಘಟನೆ ಮತ್ತು ಶ್ರೀ ವೆಂಕಟೇಶ್ವರ ಪ್ರೌಢಶಾಲೆ ದಿಬ್ಬೂರಹಳ್ಳಿ ಇವರ ಸಹಯೋಗದಲ್ಲಿ 20 ಸಾವಿರ ಬೀಜದುಂಡೆಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೊಂಗೆ, ಬೇವು, ಬಿದಿರು, ಹುಣಸೆ, ಅಶೋಕ, ನೇರಳೆ ಮುಂತಾದ ಬೇರೆ ಬೇರೆ ಜಾತಿ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿ ಕಳೆದ ಜುಲೈ 15ರಂದು ಬೀಜದುಂಡೆಗಳನ್ನು ತಯಾರಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸುಮಾರು 20 ಸಾವಿರ ಬೀಜದುಂಡೆಗಳನ್ನು ತಯಾರಿಸಿದ್ದೆವು.
ಈಚೆಗೆ ಮಳೆ ಬಿದ್ದು ನೆಲವು ಹದವಾಗಿದೆ. ಕೋಲಿನಲ್ಲಿ ಸ್ವಲ್ಪ ಗುಣಿ ತೆಗೆಯುತ್ತಾ ಬೀಜದುಂಡೆಗಳನ್ನು ಹಾಕುತ್ತಾ ಸಾಗುತ್ತೇವೆ. ತಲಕಾಯಲ ಬೆಟ್ಟಗಳ ಸಾಲಿನಲ್ಲಿ ಗಾಂಡ್ಲಚಿಂತೆ ರಸ್ತೆಯಲ್ಲಿ ಇವನ್ನು ಸಣ್ಣ ಗುಂಡಿ ತೆಗೆದು ನಾಟಿ ಮಾಡುತ್ತೇವೆ. ಅರಣ್ಯ ಇಲಾಖೆಯವರೂ ಸಾಕಷ್ಟು ಗುಂಡಿ ತೋಡಿಟ್ಟಿದ್ದಾರೆ. ಮಳೆ ಬೀಳುತ್ತಿದ್ದಂತೆಯೇ ಬೀಜ ಮೊಳಕೆಯೊಡೆದು ಜೊತೆಗಿರುವ ಗೊಬ್ಬರದ ಪೋಷಕಾಂಶ ಬಳಸಿಕೊಂಡು ಸದೃಢವಾಗಿ ಬೆಳೆಯುತ್ತದೆ ಎಂದು ವಿವರಿಸಿದರು.
ಉಪವಲಯ ಅರಣ್ಯಾಧಿಕಾರಿ ರಾಮಾಂಜಿನೇಯುಲು, ಯುವಶಕ್ತಿ ಸಂಘಟನೆಯ ಜಿ.ಜಯರಾಮ್, ಹಿತ್ತಲಹಳ್ಳಿ ಮುನಿರಾಜು, ನವೀನ್, ಮಧು, ಶಿಕ್ಷಕ ಸದಾಶಿವ, ಶ್ರೀ ವೆಂಕಟೇಶ್ವರ ಪ್ರಾಢಶಾಲೆ, ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಗದೀಶ್ವರ ಕಾನ್ವೆಂಟ್, ಎಸ್‌ಎಂಇ ಕಾನ್ವೆಂಟ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೀಜದುಂಡೆಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -