ಆಧುನಿಕ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮಗಳಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸೌಪರ್ಣಿಕ ವಲಯ ಸಂಯೋಜಕ ಶ್ರೀಕಾಂತ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಭವನದಲ್ಲಿ ಬುಧವಾರ ಸಂಜೆ ನಡೆದ ಗ್ರಾಮಾಂತರ ಮೂರನೇ ಉಚಿತ ಯೋಗ ಶಿಕ್ಷಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿತ್ಯ ಯೋಗ ಮಾಡುವುದರಿಂದ ಮನುಷ್ಯನ ದೇಹ ಸ್ಥಿತಿ ಹತೋಟಿಯಲ್ಲಿರುತ್ತದೆ. ಶಿಸ್ತು, ಸಂಸ್ಕಾರ, ಸಂಯಮ, ಏಕಾಗ್ರತೆ ಮತ್ತು ಮನಸ್ಸಿನ ನಿಯಂತ್ರಣಗಳು ಯೋಗದ ಉಪಯೋಗಗಳಾಗಿವೆ. ನಿರಂತರ ಯೋಗ ಸಾಧನೆಯಿಂದ ಖಾಯಿಲೆಗಳಿಂದ ದೂರವುಳಿಯಬಹುದು.
ಸರಳ ಜೀವನ, ಉದಾತ್ತ ಚಿಂತನೆ ಇದು ಯೋಗದ ಒಂದು ವಿಧಾನ. ಈ ರೀತಿಯಲ್ಲಿ ಬದುಕಿ ಜಗತ್ತಿಗೆ ಬೆಳಕು ನೀಡಿದವರು ನಮ್ಮ ಋಷಿಮುನಿಗಳು. ಬೆಳಗ್ಗೆ ಬೇಗ ಎದ್ದರೆ ಶರೀರ ಮತ್ತು ನರಗಳು ಚೈತನ್ಯಗೊಳ್ಳುವುವು, ಮನಸ್ಸು ನಿರ್ಮಲವಾಗುವುದು, ಬುದ್ಧಿ ಚುರುಕಾಗುವುದು. ಇಷ್ಟು ಮಾತ್ರವಲ್ಲದೇ, ಉದಯ ಸೂರ್ಯನ ಎಳೆಯ ಕಿರಣಗಳಲ್ಲಿರುವ ವಿಟಮಿನ್ ‘ಡಿ’ಯು ನಮಗೆ ಯಥೇಚ್ಛವಾಗಿ ಸಿಗುತ್ತದೆ. ಇದರಿಂದ ಮಲಬದ್ಧತೆ, ಸಂಧಿವಾತ, ತಲೆನೋವು, ಕಣ್ಣಿನ ದೋಷ, ಮಾನಸಿಕ ಒತ್ತಡ ನಿವಾರಣೆಯಾಗುವುದು. ನಂತರ ನಮ್ಮ ನಿತ್ಯಕರ್ಮಾದಿಗಳನ್ನು ಮುಗಿಸಿ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ ಮಾಡಬೇಕು. ಇದರಿಂದ ಶರೀರ ಸದೃಢಗೊಳ್ಳುವುದು. ನಾವು ಯಾವುದೇ ಕಾರ್ಯ ಮಾಡಬೇಕಾದಲ್ಲಿ ಸದೃಢವಾದ ಶರೀರ ಬಹಳ ಮುಖ್ಯ. ದುರ್ಬಲ ಶರೀರದಿಂದ ಯಾವ ಕಾರ್ಯ ಮಾಡಲೂ ಸಾಧ್ಯವಿಲ್ಲ ಎಂದು ವಿವರಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮೇಲೂರು ಶಾಖೆಯ ಅಧ್ಯಕ್ಷ ಜಯದೇವ್, ಯೋಗಶಿಕ್ಷಕರಾದ ಸುಂದರಾಚಾರಿ, ಲಕ್ಷ್ಮಣ್, ಯೋಗ ಬಂಧುಗಳಾದ ಎನ್.ಶಿವಕುಮಾರ್, ಧರ್ಮೇಂದ್ರ, ಶ್ರೀನಿವಾಸ್, ಈಶ್ವರಮ್ಮ ಹಾಜರಿದ್ದರು.
- Advertisement -
- Advertisement -
- Advertisement -