ಮಕ್ಕಳು ಯಾವ ಕ್ಷೇತ್ರ, ವಿಷಯದ ಬಗ್ಗೆ ಆಸಕ್ತಿಯನ್ನು ತೋರುತ್ತಾರೋ ಅದನ್ನು ಗುರ್ತಿಸಿ ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪಾಠ ಪ್ರವಚನಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಕ್ರೀಡೆ, ಸಾಂಸ್ಕೃತಿಕ, ಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ನೀಡಿದಾಗ ಮಾತ್ರ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ. ಪ್ರತಿಭಾವಂತರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಈ ಸಮುದಾಯದಿಂದ ಆಗಬೇಕಿದೆ ಎಂದು ಆಶಿಸಿದರು.
ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದ ಪ್ರಥಮ ಸ್ಥಾನ ಪಡೆದವರಿಗೆ ೩೦೦ ರೂ, ದ್ವಿತೀಯ ಸ್ಥಾನಗಳಿಸಿದವರಿಗೆ ೨೫೦ ಹಾಗೂ ತೃತೀಯ ಸ್ಥಾನಪಡೆದವರಿಗೆ ೨೦೦ ರೂ.ಗಳ ನಗದು ಪ್ರೋತ್ಸಾಹದ ಹಣವನ್ನು ನೀಡಲಾಯಿತು.
ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಕಾರ್ಯದರ್ಶಿ ನಾರಾಯಣಸ್ವಾಮಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ್, ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಶಾಲಾ ಶಿಕ್ಷಕರು ಹಾಜರಿದ್ದರು.
ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು
ಉದ್ದಜಿಗಿತ-: ನವೋದಯ ಶಾಲೆಯ ಚೇತನ್(ಪ್ರಥಮ), ಎತ್ತರ ಜಿಗಿತ ಹಾಗೂ ಗುಂಡು ಎಸೆತ-: ಶ್ರೀಸರಸ್ವತಿ ಕಾನ್ವೆಂಟ್ನ ರಿಯಾಜ್ಪಾಷ(ಪ್ರಥಮ), ಚಕ್ರ ಎಸೆತ-: ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಜಗದೀಶ್(ದ್ವಿತೀಯ), ಗುಂಡು ಎಸೆತ-: ಜಂಗಮಕೋಟೆ ಜ್ಞಾನ ಜ್ಯೋತಿ ಶಾಲೆಯ ಜಗದೀಶ್(ತೃತೀಯ)ಸ್ಥಾನ ಪಡೆದುಕೊಂಡಿದ್ದಾರೆ.
೧೦೦ಮೀ ಓಟ-: ಜಂಗಮಕೋಟೆ ಶಾಲೆಯ ಸಾಕ್ಷಿ(ತೃತೀಯ), ಎಚ್.ಕ್ರಾಸ್ನ ಸುಮುಖ ಶಾಲೆಯ ಚಂದನ ೨೦೦ ಮೀ ಓಟದಲ್ಲಿ (ದ್ವಿತೀಯ), ೪೦೦ ಮೀ ಓಟದಲ್ಲಿ ತೃತೀಯ ಸ್ಥಾನ, ೨೦೦ ಮೀ ಓಟ-: ಜಂಗಮಕೋಟೆ ಜ್ಞಾನ ಜ್ಯೋತಿ ಶಾಲೆಯ ಮೇಘ(ತೃತೀಯ), ೬೦೦ ಮೀ ಓಟ-: ಜ್ಞಾನಜ್ಯೋತಿ ಶಾಲೆಯ ಹರ್ಷಿತ(ತೃತೀಯ)ಸ್ಥಾನ.
ಜಂಗಮಕೋಟೆ ಜ್ಞಾನಜ್ಯೋತಿ ಶಾಲೆಯ ಜೆ.ಪಿ.ಸಿಂಧು ೨೦೦ ಮೀ ಓಟದಲ್ಲಿ(ದ್ವಿತೀಯ), ೧೦೦ ಮೀ ಓಟದಲ್ಲಿ(ತೃತೀಯ), ಎತ್ತರ ಜಿಗಿತ-: ಡಾಲಿನ್ ಶಾಲೆಯ ಹರ್ಷಿಯಾ ತಾಜ್(ಪ್ರಥಮ), ವಾಸವಿ ಶಾಲೆಯ ಯಶಸ್ವಿನಿ ಚಕ್ರ ಎಸೆತದಲ್ಲಿ(ಪ್ರಥಮ), ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ.
ಗುಂಡು ಎಸೆತ-: ಮೇಲೂರಿನ ಸೇಂಟ್ ಥಾಮಸ್ ಶಾಲೆಯ ದೀಪಿಕಾ(ತೃತೀಯ), ೮೦೦ ಮೀ ಓಟ-: ತುಮ್ಮನಹಳ್ಳಿ ಸರ್ಕಾರಿ ಶಾಲೆಯ ಸುಷ್ಮ(ತೃತೀಯ), ತುಮ್ಮನಹಳ್ಳಿ ಸರ್ಕಾರಿ ಶಾಲೆಯ ಗಾಯಿತ್ರಿ ೩೦೦೦ ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ೧೫೦೦ ಮೀಟರ್ನಲ್ಲಿ ತೃತೀಯ ಸ್ಥಾನ.