ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ

0
516

ಬಯಲುಸೀಮೆ ಭಾಗಕ್ಕೆ ಕುಡಿಯುವ ಹಾಗು ಕೃಷಿಗೆ ನೀರು ನೀಡುವ ವಿಚಾರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರ ಸೋತಿರುವುದಷ್ಟೇ ಅಲ್ಲದೇ ಕೊಟ್ಟ ಮಾತಿಗೆ ತಪ್ಪಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ಘಟಕದ ಕಚೇರಿಯ ಆವರಣದಲ್ಲಿ ಬುದವಾರ ಏರ್ಪಡಿಸಲಾಗಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಜಲ ಸಂಪನ್ಮೂಲಗಳ ಕೊರತೆಯಿಲ್ಲ ಆದರೆ ಅದನ್ನು ಸಮರ್ಪಕವಾಗಿ ಬಳಸಲು ರಾಜ್ಯ ಸರ್ಕಾರ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದ ಅವರು ಕೇಂದ್ರ ಹಾಗು ರಾಜ್ಯ ಸರ್ಕಾರಗಳೆರಡೂ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸರ್ಕಾರದ ತಪ್ಪು ಆರ್ಥಿಕ ನೀತಿಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಇನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಒಕ್ಕಲುತನ ಮುಗಿಸಲು ಮುಂದಾಗಿದೆ. ಕೇಂದ್ರ ಸರ್ಕಾರ ಕೇವಲ ಅಂಬಾನಿ, ಅದಾನಿಯನ್ನು ಮಾತ್ರ ಆರ್ಥಿಕವಾಗಿ ಬೆಳೆಸಲು ಅಧಿಕಾರ ಬಳಸುತ್ತಿದ್ದ ದೇಶದ ಅನ್ನದಾತನ ಬಗ್ಗೆ ಇವರಿಗೆ ಯಾವುದೇ ಚಿಂತನೆಯಿಲ್ಲ ಎಂದರು.
ಬಯಲುಸೀಮೆ ಪ್ರದೇಶಕ್ಕೆ ಕೃಷಿ ಆಧಾರಿತ ನೀರಾವರಿ ಯೋಜನೆ ಜಾರಿಗೊಳಿಸಲು ಮಾತು ತಪ್ಪಿದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜೂನ್ 01 ರಂದು ಬೈಕ್ ರ್ಯಾಲಿ ಮೂಲಕ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಮುಂಬರುವ ಜೂನ್ 01 ರ ಗುರುವಾರ ಬೈಕ್ ರ್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಬೈಕ್‍ಗಳ ಮೂಲಕ ರ್ಯಾಲಿಯಲ್ಲಿ ಭಾಗವಹಿಸಲಿದ್ದೇವೆ ಎಂದರು.
ರೈತ ವಿರೋಧಿ ನೀತಿ ಹಾಗು ಕೊಟ್ಟ ಮಾತಿನಂತೆ ನಡೆಯದೇ ಮಾತಿಗೆ ತಪ್ಪಿದ ಸರ್ಕಾರದ ವಿರುದ್ದ ಆಯೋಜಿಸಲಾಗಿರುವ ಬೃಹತ್ ಬೈಕ್ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು, ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಶಿವಪ್ಪ, ಕೋಲಾರ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಬಿ.ವಿ.ಮುನೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಡಿ.ವಿ.ವೆಂಕಟೇಶ್, ಕೊಂಡಪ್ಪನವರ ವೇಣು, ದೇವರಾಜ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!