21.1 C
Sidlaghatta
Tuesday, October 4, 2022

ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭ

- Advertisement -
- Advertisement -

ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿಕೊಂಡಿರುವ ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಇ-ಹರಾಜು ಪ್ರಾರಂಭವಾಯಿತು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರು ೫೦ ರಿಂದ ೬೦ ಟನ್ನಷ್ಟು ಗೂಡು, ರಾಜ್ಯ ಹಾಗೂ ಹೊರರಾಜ್ಯದಿಂದ ಬರುತ್ತಿದ್ದು, ರೈತರು ರೇಷ್ಮೆ ಗೂಡನ್ನು ಹಾಕಲು ಜಾಲರಿಗಳಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಮಂದಿ ಮಧ್ಯವರ್ತಿಗಳು ಜಾಲರಿಗಳಿಗಾಗಿ ರೈತರಿಂದ ಹಣವನ್ನು ತೆಗೆದುಕೊಂಡು ಬಿಟ್ಟುಕೊಡುತ್ತಿದ್ದ ದೂರುಗಳು ಹೆಚ್ಚಾಗಿ ರೈತರಿಂದ ಕೇಳಿ ಬರುತ್ತಿತ್ತು. ಈ ಸಮಸ್ಯೆಗಳನ್ನು ದೂರ ಮಾಡಲು ಪ್ರಾಥಮಿಕ ಹಂತವಾಗಿ ರಾಮನಗರ ಹಾಗೂ ಕೊಳ್ಳೆಗಾಲದಲ್ಲಿ ಇ-ಹರಾಜು ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗಿತ್ತು.
‘ಇ-ಹರಾಜಿನಲ್ಲಿ ರೀಲರುಗಳು ತಮ್ಮ ಮೊಬೈಲ್ಗಳ ಮೂಲಕ ಸ್ಕ್ರೀನ್ ಮೇಲೆ ಬರುವಂತಹ ಲಾಟುಗಳ ಸಂಖ್ಯೆ ಹಾಗೂ ಅದಕ್ಕೆ ಸಿಕ್ಕಿರುವ ದರಗಳನ್ನು ಆಧಾರ ಮಾಡಿಕೊಂಡು ಹರಾಜು ಮಾಡುತ್ತಾರೆ. ಹರಾಜು ಮುಗಿದ ನಂತರ ಒಂದು ಗಂಟೆಗಳ ಕಾಲ ಇ-ಹರಾಜು ನಿಲ್ಲಿಸಿ, ರೈತರ ಬಳಿಗೆ ಹೋಗಿ ದರಗಳು ಸಮಾಧಾನಕರವಾಗಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ರೈತರು ಒಪ್ಪಿಗೆ ಸೂಚಿಸಿದ ನಂತರವೇ ಅಂತಹ ಗೂಡನ್ನು ತೂಕ ಮಾಡಲು ತೆಗೆದುಕೊಂಡು ಹೋಗಲಾಗುತ್ತದೆ. ಪುನಃ ಎರಡನೇ ಬಾರಿಗೆ ಇ-ಹರಾಜು ಪ್ರಾರಂಭ ಮಾಡಲಾಗುತ್ತದೆ. ಈ ಹಂತದಲ್ಲೂ ಹರಾಜು ಮುಗಿದ ನಂತರ ಇಲಾಖೆಯ ಅಧಿಕಾರಿಗಳು ಹೋಗಿ ದರಗಳನ್ನು ಖಚಿತ ಪಡಿಸಿಕೊಂಡ ನಂತರವೇ ಗೂಡನ್ನು ತೂಕಕ್ಕೆ ಕಳುಹಿಸಲಾಗುತ್ತದೆ, ಒಂದು ವೇಳೆ ಎರಡೂ ಹರಾಜುಗಳಲ್ಲಿ ರೈತರು ಒಪ್ಪಿಗೆ ನೀಡದಿದ್ದಲ್ಲಿ ಗೂಡಿನ ಗುಣಮಟ್ಟದ ಹಾಗೂ ಮಾರುಕಟ್ಟೆಯಲ್ಲಿ ಹರಾಜಾದ ದರಗಳ ಆಧಾರದ ಮೇಲೆ ರೈತರ ಮನವೊಲಿಸಿ ಗೂಡನ್ನು ತೂಕ ಮಾಡಿಸಿ, ರೈತರಿಗೆ ಹಣವನ್ನು ಒದಗಿಸಲಾಗುತ್ತದೆ’ ಎಂದು ಜಂಟಿ ನಿರ್ದೇಶಕ ಪ್ರಭಾಕರ್ ತಿಳಿಸಿದರು.
ಮೊದಲ ಬಾರಿಗೆ ಇ-ಹರಾಜಿನಲ್ಲಿ ಭಾಗವಹಿಸಿದ್ದ ರೀಲರುಗಳು ಗೊಂದಲಕ್ಕೆ ಈಡಾಗುವಂತಾಯಿತು, ಕೆಲವು ರೀಲರುಗಳು ತಮ್ಮ ಮೊಬೈಲ್ಗಳ ಮೂಲಕ ಗೂಡಿಗೆ ದರನಿಗದಿಪಡಿಸುವಾಗ ನೂರು ರೂಪಾಯಿಗಳಷ್ಟು ದರವನ್ನು ಹೆಚ್ಚಿಗೆ ನೀಡಿ ಪೇಚಿಗೆ ಸಿಲುಕಿಕೊಂಡರು. ಹೆಚ್ಚು ದರಗಳನ್ನು ನೀಡಿರುವುದನ್ನು ಗಮನಿಸಿದ ರೈತರ ಮುಖದಲ್ಲಿ ಸಂತಸ ಕಂಡು ಬಂದರೆ, ರೀಲರುಗಳು ಕೈ ತಪ್ಪಿನಿಂದಾಗಿ ಆಗಿರುವ ತೊಂದರೆಗೆ ಅಧಿಕಾರಿಗಳ ಮೊರೆ ಹೋಗಿದ್ದರು. ಪ್ರಥಮವಾಗಿ ಪ್ರಾರಂಭವಾಗಿರುವುದರಿಂದ ಇಂತಹ ಗೊಂದಲಗಳು ಸಹಜವೆಂದು ರೈತರನ್ನು ಪುನಃ ಮನವೊಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದರು.
ಕಾವೇರಿ ಗೋಡನ್ನಲ್ಲಿ ಹರಾಜು ಪ್ರಾರಂಭವಾಗಿ ೧೫ ನಿಮಿಷಗಳು ಕಳೆದರೂ ಕೂಡಾ ವೈ.ಫೈ.ಕೆಲಸ ಮಾಡದೇ ರೀಲರುಗಳು ಸ್ವಲ್ಪಸಮಯ ಗಲಿಬಿಲಿಗೆ ಒಳಗಾಗಬೇಕಾಯಿತು. ಇದನ್ನರಿತ ಇಲಾಖೆಯ ಅಧಿಕಾರಿಗಳು ತಕ್ಷಣ ಕಂಟ್ರೋಲ್ ರೂಂಗೆ ಬಂದು, ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಫಲರಾದರು. ಮುಂದಿನ ದಿನಗಳಲ್ಲಿ ಕಂಟ್ರೋಲ್ ರೂಂನಲ್ಲಿ ಕುಳಿತು ಹರಾಜಿನ ಸಮಯಕ್ಕೆ ಸರಿಯಾಗಿ ಈ ರೀತಿಯ ಸಮಸ್ಯೆಗಳನ್ನು ಮಾಡಿದರೆ, ಎಲ್ಲಿ ಸಮಸ್ಯೆಯಾಗುತ್ತದೆಯೋ ಅಲ್ಲಿನ ರೈತರಿಗೆ ಅನ್ಯಾಯವಾಗುವುದಿಲ್ಲವೇ ಎಂದು ತಮ್ಮ ತಮ್ಮಲ್ಲೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು.
ದೇವನಹಳ್ಳಿ ತಾಲ್ಲೂಕಿನ ರೇಷ್ಮೆ ಸಹಾಯಕ ನಿರ್ದೇಶಕ ಬೋಜಣ್ಣ, ವಿಜಯಪುರ ಮಾರುಕಟ್ಟೆಯ ಉಪನಿರ್ದೆಶಕ ದಾದಾನೂರ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ತಾದೂರು ಮಂಜುನಾಥ್, ಎಸ್.ಎಂ.ರವಿಪ್ರಕಾಶ್, ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಿಂದ ಅಧಿಕಾರಿಗಳು ಆಗಮಿಸಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here