ರೇಷ್ಮೆಗೂಡು ಮಾರುಕಟ್ಟೆಯ ಮುಂಭಾಗದಲ್ಲಿರುವ ರಸ್ತೆಯನ್ನು ದುರಸ್ಥಿಗೊಳಿಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಹಾಗೂ ಹಮಾಲಿಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಮಂದಿ ರೈತರು ಗೂಡು ತೆಗೆದುಕೊಂಡು ಬರುತ್ತಾರೆ. ಆದರೆ ಕೆಲವು ಮಂದಿ ವ್ಯಾಪಾರಸ್ಥರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರಗಳನ್ನು ನಡೆಸಿಕೊಳ್ಳುತ್ತಿರುವುದರಿಂದ ಈ ರಸ್ತೆಯಲ್ಲಿ ಬರುವಂತಹ ರೈತರು ಹಾಗೂ ಗೂಡಿನ ಮೂಟೆಗಳನ್ನು ಹೊತ್ತು ಸಾಗುವಂತಹ ಹಮಾಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಹಲವು ಬಾರಿ ೫೦ ಕೆ.ಜಿ.ತೂಕದ ಮೂಟೆಗಳನ್ನು ಹೊತ್ತುಕೊಂಡು ಹೋಗುವಾಗ ಹಮಾಲಿ ಕಾರ್ಮಿಕರು ಬಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಸಾವಿರಾರು ರೂಪಾಯಿಗಳ ಹಣವನ್ನು ಖರ್ಚು ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಗೆ ಡಾಂಬರೀಕರಣ ಮಾಡಿಸಬೇಕು. ರಸ್ತೆಯ ಎರಡೂ ಕಡೆ ತಡೆಗೋಡೆಯನ್ನು ನಿರ್ಮಾಣ ಮಾಡಿ, ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ತಡೆಯಬೇಕು. ಇಲ್ಲವಾದರೆ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಅಂಗಡಿಗಳನ್ನು ತೆರವುಗೊಳಿಸಿ, ರೈತರು ಹಾಗೂ ಹಮಾಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮುಖಂಡರುಗಳು ಅಂಗಡಿಗಳ ಮಾಲೀಕರಿಗೆ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಸುರೇಶ್, ಗೋಪಾಲಗೌಡ, ಮಂಜುನಾಥ, ರಾಮಕೃಷ್ಣಪ್ಪ, ಎಂ.ದೇವರಾಜು, ವೆಂಕಟೇಶಪ್ಪ, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -