ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹರಾಜು ಕೂಗುವ ಅಧಿಕಾರಿಗಳು ಕೆಲ ರೀಲರುಗಳೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿ ರೈತರು ಗುರುವಾರ ಧಿಡೀರ್ ಪ್ರತಿಭಟನೆ ನಡೆಸಿ ಮಾರುಕಟ್ಟೆಯ ಗೇಟಿಗೆ ಬೀಗ ಜಡಿದು ಘಟನೆ ನಡೆಯಿತು.
ಒಂದೇ ಗುಣಮಟ್ಟದ ರೇಷ್ಮೆ ಗೂಡು ಗುರುವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಒಂದು ಗೋಡೋನಿನಲ್ಲಿ ಒಂದೊಂದು ಬೆಲೆಗೆ ಹರಾಜಾಗಿದೆ. ಒಂದೆಡೆ ಕೆಜಿಗೆ 350 ರೂ ಆದರೆ, ಮತ್ತೊಂದರಲ್ಲಿ 150 ರೂ, ಹಾಗೂ ಇನ್ನೊಂದರಲ್ಲಿ 80 ರೂಗಳಾಗಿವೆ. ಇದರಿಂದ ಮನನೊಂದು ಕುಪಿತಗೊಂಡ ರೈತರು, ಹಣದ ಆಸೆಯಿಂದ ರೈತರ ಗೂಡನ್ನು ಕಡಮೆ ಬೆಲೆಗೆ ಹರಾಜು ಕೂಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೇಷ್ಮೆ ಗೂಡಿನ ಮಾರುಕಟ್ಟೆಯ ಗೇಟಿನ ಬೀಗ ಜಡಿದು ಘೋಷಣೆ ಕೂಗುತ್ತಾ ಧರಣಿ ನಡೆಸಿದರು.
ರೈತ ಮುಖಂಡರು ರೇಷ್ಮೆ ಗೂಡಿನ ಗೋಡೋನ್ ಬಳಿ ಅಧಿಕಾರಿಗಳೊಂದಿಗೆ ತಮ್ಮ ಸಮಸ್ಯೆಯನ್ನು ವಿವರಿಸುವ ಸಮಯದಲ್ಲಿ ಕೆಲ ರೀಲರುಗಳು ಗೇಟಿನ ಸರಳು ಹಾಗೂ ಬೀಗವನ್ನು ಕಲ್ಲಿನಿಂದ ಜಜ್ಜಿ ಮುರಿದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ಒಂದು ಭಾಗದ ಗೇಟ್ ಜಖಂಗೊಂಡಿತು.
ನಂತರ ಸ್ಥಳಕ್ಕೆ ಆಗಮಿಸಿದ ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್ ತಮ್ಮ ಕಚೇರಿಯಲ್ಲಿ ರೈತ ಮುಖಂಡರು ಹಾಗೂ ರೀಲರುಗಳೊಂದಿಗೆ ಚರ್ಚಿಸಿದರು.
‘ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಜಾಲರಿಗಳನ್ನು ಕಾಯ್ದಿರಿಸಿ ಹಣ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಹರಾಜು ಕೂಗುವ ಅಧಿಕಾರಿಗಳನ್ನು ಒಂದೇ ಕಡೆ ಕಾರ್ಯನಿರ್ವಹಿಸದಂತೆ ಸರದಿಯ ಪ್ರಕಾರ ಬದಲಿಸುತ್ತಿರಬೇಕು. ಸ್ಯಾಂಪಲ್ ಹೆಸರಿನಲ್ಲಿ ಕೆಲ ರೀಲರುಗಳು ರೇಷ್ಮೆ ಗೂಡನ್ನು ಪ್ರತಿ ದಿನ ಕದಿಯುವ ಸಾಧ್ಯತೆಗಳಿವೆ. ಸ್ಯಾಂಪಲ್ ಪದ್ಧತಿಯನ್ನು ನಿಲ್ಲಿಸಿ, ಮಾರುಕಟ್ಟೆಯ ಹೊರಗೆ ಸ್ಯಾಂಪಲ್ ಗೂಡಿನಿಂದ ರೇಷ್ಮೆ ತೆಗೆಯುವವರನ್ನು ನೋಟಿಸ್ ಕೊಟ್ಟು ಖಾಲಿ ಮಾಡಿಸಬೇಕು. ರೇಷ್ಮೆ ಗೂಡಿನ ಹರಾಜನ್ನು ಒಂದು ಕೆಜಿಗೆ 150 ರೂಗಳಿಂದ ಪ್ರಾರಂಭಿಸಬೇಕು. ಹತ್ತು ಪೈಸೆಗಳ ಬೀಟ್ ಕೂಗುವುದನ್ನು ನಿಲ್ಲಿಸಿ ಒಂದು ರೂಗಳ ಬೀಟ್ ಕೂಗಬೇಕು’ ಎಂಬ ಬೇಡಿಕೆಗಳನ್ನು ರೈತರು ಮುಂದಿಟ್ಟರು.
ರೀಲರುಗಳು ಮಾತನಾಡಿ, ‘ಆಮದು ಸುಂಕದ ಕಡಿತದಿಂದ ಈಗಾಗಲೇ ಕಚ್ಛಾ ರೇಷ್ಮೆ ಧಾರಣೆ ಕುಸಿದಿದ್ದು, ರೀಲರುಗಳು ಸಂಕಷ್ಟದಲ್ಲಿದ್ದಾರೆ. ರೇಷ್ಮೆ ವಿನಿಮಯ ಕೇಂದ್ರದ ಮೂಲಕ ರೇಷ್ಮೆಯನ್ನು ಖರೀದಿಸಿದಲ್ಲಿ ರೇಷ್ಮೆಯ ಧರ ಕುಸಿತವನ್ನು ತಡೆಯಬಹುದು. ಹವಾಮಾನ ವೈಪರೀತ್ಯ ಹಾಗೂ ರಂಜಾನ್ ಹಬ್ಬದ ಕಾರಣದಿಂದ ರೇಷ್ಮೆ ಗೂಡಿನ ಬೆಲೆ ಕೂಡ ಇಳಿಮುಖಗೊಂಡಿದೆ’ ಎಂದು ತಿಳಿಸಿದರು.
ಸಮಸ್ಯೆಯನ್ನು ಕೇಳಿದ ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್ ಮಾತನಾಡಿ, ‘ಹೊಸ ಜಾಲರಿಗಳು ಬರಬೇಕಿದೆ. ಬಂದ ನಂತರ ‘ಇ’ ಹರಾಜು ನಡೆಯುವುದರಿಂದ ಜಾಲರಿಗಳನ್ನು ಕಾಯ್ದಿರಿಸುವುದು ಹಾಗೂ ಹರಾಜು ಏರುಪೇರು ನಿಲ್ಲಲಿದೆ. ಹರಾಜು ಕೂಗುವ ಅಧಿಕಾರಿಗಳನ್ನು ಸರದಿಯಂತೆ ಬದಲಿಸಲಾಗುವುದು. ಪೊಲೀಸ್ ಸಹಕಾರದೊಂದಿಗೆ ಸ್ಯಾಂಪಲ್ ಗೂಡಿನಿಂದ ರೇಷ್ಮೆ ತೆಗೆಯುವವರನ್ನು ಖಾಲಿ ಮಾಡಿಸಲಾಗುವುದು. ಮಾರುಕಟ್ಟೆಯಲ್ಲೂ ಸ್ಯಾಂಪಲ್ ನೆಪದಲ್ಲಿ ಗೂಡನ್ನು ಹೊರ ಹೋಗದಂತೆ ತಡೆಯುತ್ತೇವೆ’ ಎಂದು ಭರವಸೆ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ರೈತರು ಪ್ರತಿಭಟನೆಯನ್ನು ಹಿಂಪಡೆದರು.
ಸಬ್ಇನ್ಸ್ಪೆಕ್ಟರ್ ವಿಜಯ್, ಮಾರುಕಟ್ಟೆ ಅಧಿಕಾರಿಗಳಾದ ರತ್ನಯ್ಯಶೆಟ್ಟಿ, ಆಂಜನೇಯರೆಡ್ಡಿ, ರೈತರಾದ ಎಸ್.ಎಂ.ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಆರ್.ದೇವರಾಜ್, ರವಿಪ್ರಕಾಶ್, ಪ್ರತೀಶ್, ಬಾಲಮುರಳಿಕೃಷ್ಣ, ರೀಲರ್ ರೆಹಮಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -