ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷುಬಾಬಾ ದರ್ಗಾ ಮುಂಭಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಾಲ್ಮೀಕಿ ನಾಯಕ ಯುವ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿದರು.
ಪರಸ್ಪರ ಪ್ರೀತಿ, ಸೌಹಾರ್ಧತೆ ಹಾಗೂ ಗೌರವಿಸುವ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ, ಎಲ್ಲರೂ ಒಗ್ಗಟ್ಟಿನಿಂದ ಜೀವಿಸುವುದನ್ನು ರೂಡಿಸಿಕೊಳ್ಳಬೇಕು ಹಾಗೂ ಸಮುದಾಯಕ್ಕೆ ಶಾಪದಂತಿರುವ ಮದ್ಯಪಾನವನ್ನು ಎಲ್ಲರೂ ಬಿಡಬೇಕು ಎಂದು ಅವರು ತಿಳಿಸಿದರು.
ವಾಲ್ಮೀಕಿ ಸಮುದಾಯದ ಮುಖಂಡ ಅಗ್ರಹಾರ ಮುರಳಿ ಮಾತನಾಡಿ, ವ್ಯಕ್ತಿಗಿಂತ ಸಮಾಜ ದೊಡ್ಡದು ಎಂದು ಎಲ್ಲರೂ ಯೋಚಿಸಿದಾಗಷ್ಟೇ ಸಮಾಜ ಏಳಿಗೆಯಾಗುತ್ತದೆ. ಸಮಾಜದಿಂದ ಯಾವುದೇ ವ್ಯಕ್ತಿ ನಾಯಕನಾಗಬಹುದು ಆದರೆ ಯಾವುದೇ ಒಬ್ಬ ವ್ಯಕ್ತಿಯಿಂದ ಸಮಾಜ ಬೆಳೆಯಲಾರದು. ರಾಜಕೀಯವಾಗಿ ನಾವು ಜಾಗೃತರಾಗದಿದ್ದಲ್ಲಿ ನಮ್ಮನ್ನು ಯಾವುದೇ ರಾಜಕೀಯ ಪಕ್ಷ ಗುರುತಿಸುವುದಿಲ್ಲ. ಹಾಗಾಗಿ ಸಮಾಜದ ಪ್ರತಿಯೊಬ್ಬರನ್ನೂ ಜಾಗೃತಗೊಳಿಸುವ ಕೆಲಸವನ್ನು ವಾಲ್ಮೀಕಿ ಸಮಾಜದ ಯುವಶಕ್ತಿ ಮಾಡಬೇಕು ಎಂದರು.
ಸಮಾಜದ ಯಾರೂ ತಮ್ಮ ಸ್ವಾಭಿಮಾನ ಬಿಟ್ಟು ಬದುಕಬಾರದು. ನಾಯಕತ್ವದ ಗುಣಗಳು ಯಾವುದೇ ಅಂಗಡಿಯಲ್ಲಿ ಸಿಗುವ ಸರಕಲ್ಲ. ಬದಲಿಗೆ ಅದು ನಾವು ಹುಟ್ಟುತ್ತಲೇ ಬಂದಂತಹ ಗುಣ. ಹಾಗಾಗಿ ಪ್ರತಿಯೊಬ್ಬರೂ ಸ್ವಾಭಿಮಾನಿ ಜೀವನ ನಡೆಸುವ ಜೊತೆಗೆ ಸಮಾಜದ ಎಲ್ಲರನ್ನೂ ಜಾಗೃತರನ್ನಾಗಿಸಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿ, ಸಮುದಾಯದ ಏಳಿಗೆಗೆ ಯುವಕರು ಸಂಘಟಿತರಾಗುವ ಮೂಲಕ ಜನರನ್ನು ಜಾಗೃತರನ್ನಾಗಿಸುವ ಕೆಲಸ ಮಾಡಬೇಕಿದೆ. ಸಮುದಾಯದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಸಮುದಾಯದ ಹಿರಿಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಎಲ್ಲರನ್ನು ಒಗ್ಗೂಡಿಸಿಕೊಂಡು ಮಾಡಿದರೆ ಜನಾಂಗದ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹಾಸಭಾದ ಕಾರ್ಯದರ್ಶಿ ಅತ್ತಿಕೋಟೆ ವೀರೇಂದ್ರಸಿಂಹ, ಸಮುದಾಯದ ಮುಖಂಡ ಲಗುನಾಯಕನಹಳ್ಳಿ ಎನ್.ಮುನಿಯಪ್ಪ, ಮೇಲೂರು ಎಂ.ಎಂ.ಸ್ವಾಮಿ, ಹನುಮಂತಪುರ, ದ್ಯಾವಪ್ಪ, ಕೃಷ್ಣಪ್ಪ, ಚಲನಚಿತ್ರ ನಟ ಅಂಜನ್, ಯುವ ಘಟಕದ ಅಧ್ಯಕ್ಷ ಕೆ.ಎಸ್.ಗಿರೀಶ್‌ನಾಯಕ್, ಗೌರವಾಧ್ಯಕ್ಷ ದೇವರಾಜ್, ಅಣ್ಣೆಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -