ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆಯ ಸಮಯವನ್ನು ಪತ್ರಿಕಾ ಮಾದ್ಯಮದ ಮೂಲಕ ಜನರಿಗೆ ತಿಳಿಸಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ತಾಲ್ಲೂಕಿನಾದ್ಯಂತ ನೀರು ಹಾಗೂ ವಿದ್ಯುತ್ ಸಮಸ್ಯೆಯ ಕುರಿತು ಏರ್ಪಡಿಸಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಹಗಲು ಎರಡು ತಾಸು ಮತ್ತು ರಾತ್ರಿ ಎರಡು ತಾಸು ವಿದ್ಯುತ್ ನೀಡಿದರೂ ಪರವಾಗಿಲ್ಲ, ಆದರೆ ಅನಿರ್ಬಂಧಿತವಾಗಿ ನೀಡಿ ಹಾಗೂ ಸಮಯವನ್ನು ಜನರಿಗೆ ತಿಳಿಸಿ. ಸರ್ಕಾರದ ಮಟ್ಟದಲ್ಲಿ ವಿದ್ಯುತ್ ಖರೀದಿಯ ಪ್ರಕ್ರಿಯೆ ನಡೆದಿದೆ. ನಮ್ಮ ಭಾಗದ ಸಮಸ್ಯೆಯನ್ನು ಈಗಾಗಲೇ ಸಚಿವರೊಂದಿಗೆ ಚರ್ಚಿಸಿದ್ದೇನೆ. ತಾಲ್ಲೂಕಿಗೆ 480 ಮೆ.ವ್ಯಾ ವಿದ್ಯುತ್ ಅವಶ್ಯವಿದ್ದು, ಈಗ 140 ಮೆ.ವ್ಯಾ ವಿದ್ಯುತ್ ಮಾತ್ರ ಸರಬರಾಜಾಗುತ್ತಿದೆ. ಇನ್ನು ಕನಿಷ್ಠ 60 ರಿಂದ 80 ಮೆ.ವ್ಯಾ ವಿದ್ಯುತ್ ನೀಡಿದಲ್ಲಿ ತಾತ್ಕಾಲಿಕವಾಗಿ ತೊಂದರೆಗಳು ತಪ್ಪುತ್ತವೆ. ಅದರ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸಚಿವರಲ್ಲಿ ತಿಳಿಸಿ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ನೀರಿನ ಸಮಸ್ಯೆ: ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಂಸದ ಕೆ.ಎಚ್.ಮುನಿಯಪ್ಪ, ತಾಲ್ಲೂಕಿನಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಕ್ಷಣ ಜಾರಿಗೆ ಬರುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ಅದರಂತೆ ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಬೆಸ್ಕಾಂ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಸಹಾಯಕ ಎಂಜಿನಿಯರ್ ಸೋಮವಾರ ಹೊರತು ಪಡಿಸಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಿಗೆ ದಿನಕ್ಕೆರಡು ತಾಸು ಭೇಟಿ ನೀಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ರೈತರಿಗೆ ಮನವೊಲಿಸಿ ಅವರ ಬೆಳೆಗಳಿಗೆ ಬೆಲೆ ನಿಗದಿಪಡಿಸಿ ಅವರ ಕೊಳವೆ ಬಾವಿಗಳಿಂದ ನೀರನ್ನು ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಒದಗಿಸಿ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಾ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಮಾಂಜಿನಪ್ಪ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತಿ ಎಇಇ ಶಿವಾನಂದ್, ಬೆಸ್ಕಾಂ ಅಧಿಕಾರಿ ಅನ್ಸರ್ ಪಾಷ, ನಗರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಆಸ್ಪತ್ರೆಗೆ ನೀರಿನ ವ್ಯವಸ್ಥೆ: ‘ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತದಿಂದ 100 ಕೊಳವೆ ಬಾವಿ ಕೊರೆಸಿದರೆ, 60 ರಲ್ಲಿ ನೀರು ಸಿಗುತ್ತಿಲ್ಲ. ಹಾಗಾಗಿ ನೀರು ಸಿಗುವುದನ್ನು ಇತರರಿಗೂ ಹಂಚಿಕೆ ಮಾಡಿ. ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಕೊಳವೆ ಬಾವಿ ಕೊರೆಸಿರುವುದಕ್ಕೆ ತಕ್ಷಣ ಪಂಪು ಮತ್ತು ಮೋಟರ್ ಅಳವಡಿಸಿ, ಸಾರ್ವಜನಿಕ ಆಸ್ಪತ್ರೆಗೂ ಪೈಪ್ಲೈನ್ ಅಳವಡಿಸಿ ಹಂಚಿಕೆ ಮಾಡಿ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ನಗರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್ ಅವರಿಗೆ ತಿಳಿಸಿದರು.
- Advertisement -
- Advertisement -
- Advertisement -
- Advertisement -