ಕಳೆದ ನಾಲ್ಕು ದಶಕಗಳಿಂದ ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಕೂಡಾ ನಮ್ಮನ್ನಾಳುತ್ತಿರುವ ಸರ್ಕಾರಗಳು ಮಾತ್ರ ನಮ್ಮ ಭಾಗಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದರ ಭಾಗವಾಗಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.
ನಗರದ ಪ್ರವಾಸಿಮಂದಿರದ ಬಳಿಯಲ್ಲಿ ಆಯೋಜನೆ ಮಾಡಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ, ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಪಕ್ಷಗಳ ಯಾವುದೇ ಸರ್ಕಾರಗಳು ನಮ್ಮ ಭಾಗದ ರೈತರುಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ, ನೀರಾವರಿ ಯೋಜನೆಗಳ ವಿಚಾರದಲ್ಲಿ ಮೂಲೆಗುಂಪು ಮಾಡಲು ಹೊರಟಿವೆ, ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಭಾಗದ ಹೋರಾಟಗಾರರು, ರೈತರನ್ನು ದಿಕ್ಕುತಪ್ಪಿಸುವಂತಹ ಹುನ್ನಾರವನ್ನು ನಡೆಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದರೂ ಕೂಡಾ ಯೋಜನೆಯ ಹೆಸರಿನಲ್ಲಿ ಗುತ್ತಿಗೆದಾರರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಧು ಸೀತಪ್ಪ ಅವರು ತಯಾರಿಸಿರುವ ೯೦ ನಿಮಿಷಗಳ ಕಾಲದ ಸಿ.ಡಿ.ಗಳನ್ನು ರಾಜಕಾರಣಿಗಳು ವೀಕ್ಷಣೆ ಮಾಡಬೇಕು. ಗಾಯದ ಮೇಲೆ ಬರೆಎಳೆದಂತೆ ಕೇಂದ್ರ ಸರ್ಕಾರವೂ ಕೂಡಾ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ೨೮ ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ನಡೆಸಲು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯಾಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಆನೆಮಡಗು ಶಿವಣ್ಣ, ಹಿತ್ತಲಹಳ್ಳಿ ದೇವರಾಜ್, ದೊಡ್ಡತೇಕಹಳ್ಳಿ ಕದಿರಪ್ಪ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -