ವಿರಾಟ್‌ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ

0
444

ನಗರದ ಒಂದನೇ ನಗರ್ತಪೇಟೆಯ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಬುಧವಾರ ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಸಮಿತಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಲಿ, ಕಾಳಿಕಾಂಬ ಕಮಠೇಶ್ವರ ಯುವಕ ಮಂಡಲಿ ವತಿಯಿಂದ ಶ್ರೀಮತ್‌ ವಿರಾಟ್‌ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ ಮತ್ತು ಸಾಮೂಹಿಕ ಉಪನಯನಗಳ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ರಾಜಘಟ್ಟದ ಶ್ರೀ ಸದ್ಗುರು ವೀರಾನಂದ ಅಮರಜ್ಯೋತಿ ವಿಶ್ವಕುಂಡಲಿ ಯೋಗಾಶ್ರಮದ ಕಾಳೀಸುತ ಶ್ರೀ ಉಮಾ ಮಹೇಶ್ವರ ಸ್ವಾಮೀಜಿ ಮಾತನಾಡಿದರು.
ಗುಡಿ, ಗೋಪುರಗಳಲ್ಲಿರುವ ವಿಗ್ರಹ ಸಹಿತ ವಿವಿಧ ಬಗೆಯ ಕುಸುರಿ ಕೆಲಸಗಳಿಂದ ಪ್ರಖ್ಯಾತಿಗೊಂಡ ವಿಶೇಷವಾದ ಧರ್ಮವೊಂದಿದ್ದರೆ ಅದು ವಿಶ್ವಕರ್ಮ ಧರ್ಮ. ಸೂರ್ಯದೇವ ಹಾಗೂ ಯಮ ಧರ್ಮರಾಯನ ಬಂಧು ಬಳಗದವರಾದ ವಿಶ್ವಕರ್ಮ ಜನಾಂಗ ಚಿನ್ನ, ವಜ್ರ, ಸಿಂಹಾಸನ, ಮಂಚ, ಕುರ್ಚಿ, ಮನೆ ಮಹಡಿ, ದೇವರ ವಿಗ್ರಹ, ಕುಸುರಿ ವಸ್ತುಗಳನ್ನು ನಿರ್ಮಿಸಿ ಸಮಾಜಕ್ಕೆ ಅಗಾಧವಾದ ಕೊಡುಗೆ ನೀಡಿದೆ. ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್ಯ ಮಾತನಾಡಿ,‘ಚಿನ್ನ, ಬೆಳ್ಳಿ, ಮರಗೆಲಸ, ಕಮ್ಮಾರಿಕೆ, ಶಿಲ್ಪಕಲೆ ಮತ್ತಿತರ ಕುಶಲಕರ್ಮಿ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದರಿಂದ ಸಿಗುವ ಸೌಲಭ್ಯಗಳನ್ನು ಬಡ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ’ ಎಂದು ತಿಳಿಸಿದರು.
ದೇವಾಲಯದಲ್ಲಿ ಮೂಲ ವಿಗ್ರಹಳಿಗೆ ಅಭಿಷೇಕ, ಸಾಮೂಹಿಕ ಉಪನಯನಗಳು, ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಯಜ್ಞ, ಹೋಮ, ವಿಶ್ವಕರ್ಮ ಯಜ್ಞ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದಗಳ ವಿನಿಯೋಗ ನಡೆಯಿತು.
ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಮುನಿರತ್ನಮಾಚಾರಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ, ಈಶ್ವರಾಚಾರಿ, ಕೃಷ್ಣಾಚಾರಿ, ಆರ್.ಜಗದೀಶ್‌ಕುಮಾರ್, ಪ್ರಧಾನ ಅರ್ಚಕ ಮುನೀಶ್ವರಾಚಾರಿ, ಗೋಪಿನಾಥ್‌, ಮಂಜುಳಾ ಜಗದೀಶ್‌, ಲಕ್ಷ್ಮೀನಾರಾಯಣಮ್ಮ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!