ಮಕ್ಕಳ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡುವಂತಹ ಸ್ಥಿತಿಯಲ್ಲಿರುವ ಶಾಲೆಯ ಶಿಥಿಲವಾಗಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಪೋಷಕರು ತಾಲ್ಲೂಕಿನ ಪಲಿಚೇರ್ಲು ಗ್ರಾಮದಲ್ಲಿ ಒತ್ತಾಯಿಸಿದ್ದಾರೆ.
ಪಲಿಚೇರ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಶಿಥಿಲವಾಗಿರುವ ಕಟ್ಟಡವನ್ನು ಶೀಘ್ರವಾಗಿ ತೆರವು ಮಾಡಬೇಕು. ಜೋರಾಗಿ ಮಳೆ ಬಂದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಕಟ್ಟಡ ಬಿದ್ದುಹೋಗುವಂತಹ ಸ್ಥಿತಿಯಲ್ಲಿ ಕಟ್ಟಡವಿದೆ. ಶಾಲೆಯಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದರೆ, ಶಿಥಿಲವಾಗಿರುವ ಕಟ್ಟಡದ ಪಕ್ಕದಲ್ಲೆ ಹೋಗಬೇಕು. ನಲಿಕಲಿ ಮಕ್ಕಳು ಕಲಿಯುವಂತಹ ಕೊಠಡಿಯೂ ಕೂಡಾ ಹಳೇಯ ಕಟ್ಟಡದ ಪಕ್ಕದಲ್ಲಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದರೆ ಭಯವಾಗುತ್ತದೆ. ಯಾವ ಸಂದರ್ಭದಲ್ಲಿ ಏನು ಸಂಭವಿಸುತ್ತೊ ಎನ್ನುವಂತಹ ಆತಂಕ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು.
ಮಕ್ಕಳಿಗೆ ಆಟವಾಡಲೂ ಮೈದಾನವಿಲ್ಲದ ಕಾರಣ ಶಾಲೆಯ ಕಾಂಪೌಂಡಿನ ಆವರಣದಲ್ಲೆ ಮಕ್ಕಳು ಆಟವಾಡಬೇಕು. ಒಂದೊಂದು ತರಗತಿಯ ಮಕ್ಕಳು ಆಟವಾಡುವಾಗ ಬೇರೆ ತರಗತಿಗಳ ಮಕ್ಕಳಿಗೆ ಪಾಠಪ್ರವಚನಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಶಾಲೆಯ ಆವರಣದಲ್ಲಿ ಸಮತಟ್ಟಾದ ಜಾಗವಿಲ್ಲ. ಜಲ್ಲಿಕಲ್ಲುಗಳಿಂದ ಕೂಡಿದ್ದು, ಆಟವಾಡಲು ಯೋಗ್ಯವಿಲ್ಲದಂತಾಗಿ, ಮಕ್ಕಳು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಶಾಲೆಯಲ್ಲಿರುವ ಮಕ್ಕಳು ಉಪಯೋಗ ಮಾಡುವಂತಹ ಕಪ್ಪುಹಲಗೆಗಳು ಕೂಡಾ ಬರೆಯಲು ಯೋಗ್ಯವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಹಲವು ಬಾರಿ ಶಾಲೆಯ ಆವರಣಕ್ಕೆ ಹಾವುಗಳು ಬಂದಿದ್ದು, ಮಕ್ಕಳಿಗೆ ಅಪಾಯವಾಗುವುದಕ್ಕಿಂತ ಮುಂಚೆ ಎಚ್ಚೆತುಕೊಳ್ಳಬೇಕು. ಶಾಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
– ವಿ. ಪದ್ಮಾ, ಶಾಲೆಯ ಮುಖ್ಯಶಿಕ್ಷಕಿ.
– ರಘುನಾಥರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ.