ಬರಪೀಡಿತ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ಭಾಗಿಯಾಗುವಂತೆ ಒಪ್ಪಿಸುವಲ್ಲಿ ತಾಲ್ಲೂಕಿನ ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಸದಸ್ಯರು ಸಫಲರಾಗಿದ್ದಾರೆ.
ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ 52 ಮಂದಿ ರೈತರು ತೋಟಗಾರಿಕೆ ಇಲಾಖೆ ಮತ್ತು ನಬಾರ್ಡ್ ಬ್ಯಾಂಕ್ ನೆರವಿನಿಂದ ಮಹಾರಾಷ್ಟ್ರಕ್ಕೆ ಏಳು ದಿನಗಳ ಕಾಲ ಹೆಚ್ಚಿನ ತಿಳುವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದಾರೆ. ಅಣ್ಣಾ ಹಜಾರೆ ಅವರ ಸ್ವಗ್ರಾಮ ರಾಲೆಗಾವ್ ಸಿದ್ದಿಗೆ ಹೋಗಿ ಅವರನ್ನು ಭೇಟಿ ಮಾಡಿದ ರೈತರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬರಪೀಡಿತ ಆರು ಜಿಲ್ಲೆಗಳ ಜನರ ನೀರಿನ ಬವಣೆಯನ್ನು ವಿವರಿಸಿದ್ದಾರೆ. ಕುಡಿಯಲು ಮತ್ತು ವ್ಯವಸಾಯಕ್ಕೆ 1500 ಅಡಿ ಆಳದ ನೀರನ್ನು ಬಳಸುತ್ತಾ ಫ್ಲೋರೈಡ್ ಅಂಶದಿಂದ ಖಾಯಿಲೆಗಳು ಹರಡುತ್ತಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಪರಮಶಿವಯ್ಯನವರ ವರದಿ ಆಧಾರಿತ ಯೋಜನೆಗಾಗಿ ನಾವೆಲ್ಲಾ ಹೋರಾಡುತ್ತಿದ್ದು ತಾವು ಕೂಡ ಭಾಗಿಯಾಗಿ ಶಕ್ತಿ ತುಂಬಲು ಮನವಿಯನ್ನು ಸಲ್ಲಿಸಿದರು. ತಕ್ಷಣವೇ ರೈತರ ಮನವಿಗೆ ಸ್ಪಂದಿಸಿದ ಅಣ್ಣಾ ಹಜಾರೆ ಅವರು ನಿಮ್ಮ ಹೋರಾಟದಲ್ಲಿ ಭಾಗಿಯಾಗುವೆ. ದಿನಾಂಕವನ್ನು ನಿಗದಿಪಡಿಸಿ ಎಂದು ತಿಳಿಸಿದ್ದಾರೆ.
ರಾಲೆಗಾವ್‌ಸಿದ್ದಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಡಿರುವ ನೀರಿನ ಸದ್ಬಳಕೆ, ನಿರ್ಮಿಸಿರುವ ಚೆಕ್ ಡ್ಯಾಮ್‌ಗಳು, ರೀಸೈಕಲ್ ಮಾದರಿ ಪ್ರಯೋಗಗಳಿಂದ ಅಂತರ್ಜಲ ವೃದ್ಧಿಸಿರುವ ಬಗ್ಗೆ ಹಾಗೂ ಶ್ರಮದಾನದ ಮೂಲಕ ಗ್ರಾಮ ನೈರ್ಮಲ್ಯವನ್ನು ಕಾಪಾಡಿಕೊಂಡಿರುವ ಮಾಹಿತಿಗಳನ್ನು ಪಡೆದು ನಿಮ್ಮಲ್ಲಿ ಅಳವಡಿಸಿಕೊಳ್ಳಿ ಎಂದು ರೈತರಿಗೆ ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
‘ಅಧ್ಯಯನ ಪ್ರವಾಸದಲ್ಲಿ ನಾವು ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಅವರನ್ನು ನೀರಾವರಿ ಹೋರಾಟಕ್ಕೆ ಆಹ್ವಾನಿಸಿದೆವು. ಪೂನಾದ ಎನ್.ಆರ್.ಸಿ ಸಂಶೋಧನಾ ಕೇಂದ್ರದಲ್ಲಿ ನಮ್ಮ ಪ್ರದೇಶಕ್ಕೆ ಒಗ್ಗುವ 6 ತಳಿಗಳ ಬಗ್ಗೆ ತಿಳಿದುಕೊಂಡೆವು. ನಾಸಿಕ್‌ನಲ್ಲಿ ಪ್ರಗತಿಪರ ರೈತರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದೆವು. ಮುರ್ರಾ ತಳಿಯ ಎಮ್ಮೆಗಳ ಸಾಕಾಣಿಕಾ ಕೇಂದ್ರಕ್ಕೂ ಭೇಟಿ ನೀಡಿದ್ದೆವು’ ಎಂದು ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ನಾಗೇಂದ್ರಪ್ರಸಾದ್ ತಿಳಿಸಿದರು.
ಅಧ್ಯಯನ ಪ್ರವಾಸದಲ್ಲಿ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ, ನಾಗರಾಜ್, ಶ್ರೀನಿವಾಸ್, ಕೆಂಪೇಗೌಡ, ಮುರಳಿ, ಗೋಪಾಲಪ್ಪ, ಪಿಳ್ಳವೆಂಕಟಶಾಮಣ್ಣ, ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಜನಾರ್ಧನರೆಡ್ಡಿ, ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -