ಸೇವಾದಳ ಸಂಘಟನೆ ಮೂಲಕ ಎಳವೆಯಲ್ಲಿಯೇ ಮಕ್ಕಳಿಗೆ ಸೇವಾ ಭಾವನೆ, ಶಿಸ್ತು ತರಬೇತಿ ನೀಡಿ ಅವರಲ್ಲಿ ರಾಷ್ಟ್ರ ಪ್ರೇಮ ಬೆಳೆಸಬೇಕು. ಆಪತ್ತು ಸಂಭವಿಸಿದಾಗ ಸ್ವಯಂ ಸೇವಕರಾಗಿ ಭಾಗಿಯಾಗುವ ಬೆರಳೆಣಿಕೆಯ ಸಂಘನೆಯಿದ್ದರೆ ಅದು ಭಾರತ ಸೇವಾದಳ ಎಂದು ಅಖಿಲಭಾರತ ರಾಷ್ಟ್ರ ಸೇವಾದಳದ ಮಾಜಿ ಅಧ್ಯಕ್ಷ ಭರತ್ಲಾಟ್ಕರ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಬಿ.ಎಂ.ವಿ. ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರ ಸೇವಾದಳದ ವಸತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೈಹಿಕವಾಗಿ ಬಲಾಢ್ಯರಾಗಲು ಮತ್ತು ಮಾನಸಿಕವಾಗಿ ಸದೃಢವಾಗಲು ವಿದ್ಯಾರ್ಥಿಗಳು ಭಾರತ ಸೇವಾದಳದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಮಕ್ಕಳು ಹಾಗೂ ಪೋಷಕರು ಶಿಕ್ಷಣ ಎಂದರೆ ಅಂಕಗಳಿಸುವುದು ಎಂಬ ಭ್ರಮೆಯಿಂದ ಹೊರ ಬರಬೇಕು. ರಾಷ್ಟ್ರಭಕ್ತಿ,ರಾಷ್ಟ್ರ ಪ್ರೇಮ ಬೆಳೆಸುವ ಸೇವಾದಳ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಶಿಬಿರದಲ್ಲಿ ನಡೆದ ಚರ್ಚೆ, ಸಂವಾದಗಳು ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಸಹಾಯಕವಾಗುವಂತಿದ್ದವು. ಶಿಬಿರದಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಕಳೆದ ಒಂದು ವಾರದಿಂದ ಶಿಬಿರದಲ್ಲಿ ಭಾಗವಹಿಸಿದ 103 ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿ, ಸೇವಾ ಮತ್ತು ವೈಜ್ಞಾನಿಕ ಮನೋಭಾವದ ಅರಿವು ಮೂಡಿಸಲಾಯಿತು. ದೈಹಿಕ ಕಸರತ್ತು, ಯೋಗ, ಪ್ರಾರ್ಥನೆ, ಆಟಪಾಠಗಳು, ಹಾಡುಗಳು, ನೃತ್ಯ, ಕಥೆ ಹೇಳುವುದು, ಉಪನ್ಯಾಸ, ಸಂವಾದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು ಎಂದು ಹೇಳಿದರು.
ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರುಶೆಟ್ಟಿ, ಪ್ರೊ.ಹನುಮಂತ, ರಾಮ್ ಮನೋಹರ್ ಶಾಂತವೇರಿ, ಸಾಹಿತಿ ಮಂಗ್ಳೂರು ವಿಜಯ, ವಕೀಲ ಬಿ.ಕೆ.ಮೂರ್ತಿಶ್ವರಯ್ಯ, ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ಅರವಿಂದ ಬಿ.ಕಟ್ಟಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಜಿ.ವಿ.ಸುಂದರ್, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಸರಸ್ವತಮ್ಮ ಮತ್ತಿತರರು ಶಿಬಿರಕ್ಕೆ ಆಗಮಿಸಿ ಉಪನ್ಯಾಸ ನೀಡಿದ್ದಾರೆ.
ರಾಷ್ಟ್ರ ಸೇವಾದಳದ ಪ್ರಧಾನ ಕಾರ್ಯದರ್ಶಿ ಬಾಬಾ ಸಾಹೇಬ್ ನದಾಫ್, ಚಂದನ್, ಆರತಿ, ಷಹಾಜಿ ಮತ್ತು ಅಮರ್ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಏಳು ದಿನಗಳ ಶಿಬಿರದಲ್ಲಿ ಕಲಿತ ಹಾಡುಗಳು, ನೃತ್ಯ, ವ್ಯಾಯಾಮ, ಕಸರತ್ತುಗಳನ್ನು ಪ್ರದರ್ಶಿಸಿದರು. ಬೆಂಗಳೂರು ರೋಟರಿ ಹೈಗ್ರೌಂಡ್ಸ್ ವತಿಯಿಂದ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನಿಘಂಟುಗಳನ್ನು ವಿತರಿಸಲಾಯಿತು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಬೆಂಗಳೂರು ರೋಟರಿ ಹೈಗ್ರೌಂಡ್ಸ್ ಅಧ್ಯಕ್ಷ ಆರ್.ಬಸವರಾಜ್, ಶಿವಕುಮಾರ್, ಮಂಜುನಾಥ್, ಅರವಿಂದ ನಾಯ್ಡು, ಸಂದೀಪ್, ಸಮಾಜವಾದಿ ಅಧ್ಯಯನ ಕೇಂದ್ರದ ಅಂಬಿಕಾ, ಸ್ಮೈಲ್ ಫೌಂಡೇಷನ್ ಪ್ರತಿನಿಧಿ ಪ್ರದೀಪ್ ರಾಧಾಕೃಷ್ಣ, ರಾಷ್ಟ್ರ ಸೇವಾದಳದ ಪ್ರಧಾನ ಕಾರ್ಯದರ್ಶಿ ಜಾರ್ಜ್ ಜೇಕಬ್, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಂ.ಪಿ.ಸಿ.ಎಸ್. ಅಧ್ಯಕ್ಷ ಕೋಟೆ ಚನ್ನೇಗೌಡ, ಎಸ್.ನಾರಾಯಣಸ್ವಾಮಿ, ಎಂ.ನಂಜೇಗೌಡ, ಎಂ.ವೆಂಕಟಮೂರ್ತಿ, ಪುಟ್ಟಮೂರ್ತಿ, ಬಿ.ವೈ.ಅಶ್ವತ್ಥಪ್ಪ, ಮುಖ್ಯಶಿಕ್ಷಕ ಎನ್.ವೆಂಕಟಮೂರ್ತಿ, ಎನ್.ಪಂಚಮೂರ್ತಿ, ಯಾಮ ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -