ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬರಹಗಳ ಪುಸ್ತಕ ‘ಶಾಮಂತಿ’ಗೆ ಶಿವಮೊಗ್ಗದ ಕರ್ನಾಟಕ ಸಂಘದ 2014 ನೇ ಸಾಲಿನ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ನಾ.ಡಿಸೋಜ ಪ್ರಶಸ್ತಿಯನ್ನು ಈಚೆಗೆ ಶಿವಮೊಗ್ಗದಲ್ಲಿ ಪ್ರಧಾನ ಮಾಡಲಾಯಿತು. ಪುಸ್ತಕವನ್ನು ಸಂಪಾದಿಸಿದ ಶಿಕ್ಷಕ ಎಸ್. ಕಲಾಧರ ಪ್ರಶಸ್ತಿಯನ್ನು ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಸ್ವೀಕರಿಸಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಹಾಜರಿದ್ದರು.
‘ಶಾಮಂತಿ’ಯು ಕನ್ನಮಂಗಲದ ಸರ್ಕಾರಿ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕ. ಇದರಲ್ಲಿ ಆ ಮಕ್ಕಳು ಬರೆದಿರುವ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಇದರಲ್ಲಿ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಅವರು ಪುಸ್ತಕದ ಮುಖಪುಟ, ಒಳಪುಟಗಳ ವಿನ್ಯಾಸವನ್ನು ಮಾಡಿದ್ದಾರೆ. ಇವರ ಕೆಲಸಕ್ಕೆ ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ ಸಹಕರಿಸಿದ್ದಾರೆ.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
‘ಈ ಪ್ರಶಸ್ತಿಯು ಮಕ್ಕಳ ಕ್ರಿಯಾಶೀಲತೆಗೆ ಲಭಿಸಿರುವ ಪ್ರೋತ್ಸಾಹ. ನಮ್ಮ ಶಾಲೆಯ ಮಕ್ಕಳ ಬರಹ, ಚಟುವಟಿಕೆಗೆ ಕಾರಣವಾದ ಗ್ರಾಮಸ್ಥರ ಬೆಂಬಲಕ್ಕೆ ಲಭಿಸಿರುವ ಮೆಚ್ಚುಗೆ. ಇದರಿಂದ ನಮ್ಮ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ಸಾಹ, ಹುಮ್ಮಸ್ಸು ಮೂಡಿದೆ. ಈ ಪ್ರಶಸ್ತಿಯೊಂದಿಗೆ ಅವರು ನೀಡಿರುವ ಐದು ಸಾವಿರ ರೂಗಳಿಂದ ಶಾಮಂತಿಯ ನೆನಪಿನಲ್ಲಿ ಶಾಲೆಯಲ್ಲಿ ನೋಟಿಸ್ ಬೋರ್ಡ್ ಮಾಡಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ಎಸ್. ಕಲಾಧರ.
- Advertisement -
- Advertisement -
- Advertisement -
- Advertisement -